ಕೋತಿ ದಾಳಿ: ಕುಸಿದುಬಿದ್ದು ವೃದ್ಧೆ ಸಾವು
ಕೊಪ್ಪಳ: ಮನೆಯ ಮುಂದೆ ನಿಂತಿದ್ದ ವೃದ್ಧೆಯೊಬ್ಬರ ಮೇಲೆ ಕೋತಿಯೊಂದು ಏಕಾಏಕಿ ಭೀಕರ ದಾಳಿ ನಡೆಸಿ ತಳ್ಳಿದ ಪರಿಣಾಮ, ವೃದ್ಧೆ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೊಪ್ಪಳ ನಗರದ ಬಿ.ಟಿ. ಪಾಟೀಲ್ ನಗರದಲ್ಲಿ ನಡೆದಿದೆ.ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆಯಾಗಿದ್ದಾರೆ.
ವೃದ್ಧೆ ನಜಮುನಿಸಾ ಬೇಗಂ ಅವರು ತಮ್ಮ ಮನೆಯ ಮುಂದೆ ನಿಂತುಕೊಂಡಿದ್ದಾಗ, ಎಲ್ಲಿಂದಲೋ ಬಂದ ಕೋತಿಯೊಂದು ಅವರ ಮೇಲೆ ಸಡನ್ ಆಗಿ ಎರಗಿ ತಳ್ಳಿದೆ. ಕೋತಿ ತಳ್ಳಿದ ರಭಸಕ್ಕೆ ನಿಯಂತ್ರಣ ಸಿಗದೆ ವೃದ್ಧೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ತಲೆಗೆ ಭಾರಿ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬಿದ್ದಿದ್ದ ವೃದ್ಧೆಯನ್ನು ಎಬ್ಬಿಸಲು ಮತ್ತು ರಕ್ಷಿಸಲು ತಕ್ಷಣವೇ ಓಡಿಬಂದ ಮತ್ತೊಬ್ಬ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿ ಕಚ್ಚಲು ಯತ್ನಿಸಿದೆ. ಈ ಇಡೀ ಭೀಕರ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಿಂದಾಗಿ ಬಿ.ಟಿ. ಪಾಟೀಲ್ ನಗರದ ನಿವಾಸಿಗಳು ತೀವ್ರ ಆತಂಕಗೊಂಡಿದ್ದು, ಉಪಟಳ ನೀಡುತ್ತಿರುವ ಕೋತಿಗಳನ್ನು ಸ್ಥಳದಿಂದ ಓಡಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಗರ ಸಭೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.




