ಕೇರಳದಲ್ಲಿ ಭಾರೀ ಮಳೆ: ಹಠಾತ್ ಪ್ರವಾಹಕ್ಕೆ ಐವರು ಸಾವು
ತಿರುವನಂತಪುರ: ಕೇರಳದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಹಲವೆಡೆ ಭೀಕರ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿದೆ.
ವಿವಿಧ ದುರಂತಗಳಲ್ಲಿ ಐವರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗಂಟೆಗೊಮ್ಮೆ ಪರಾಮರ್ಶೆ ನಡೆಸುವಂತೆ ವಿಪತ್ತು ನಿರ್ವಹಣಾ ಪಡೆಗೆ ಸರ್ಕಾರ ಆದೇಶಿಸಿದೆ. ಸಿಎಂ ನಿರ್ದೇಶನದಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ವಿಘ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಸಾರ್ವಜನಿಕರಿಗೆ ಎಸ್‌ಎಂಎಸ್ ಮೂಲಕ ಎಚ್ಚರಿಕೆ ರವಾನಿಸಲಾಗಿದೆ. ಅಗತ್ಯ ಬಿದ್ದಲ್ಲಿ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಮಲಪ್ಪುರಂ ಜಿಲ್ಲೆಯ ನಿಲಂಬೂರ್-ಅಮರಂಬಲಂ ಪ್ರದೇಶದ ಕೊಟ್ಟಪ್ಪುಳ ನದಿಯಲ್ಲಿ ಸ್ನಾನಕ್ಕಿಳಿದಿದ್ದ ವಂದೂರ್ ಮೂಲದ ಐವರ ಗುಂಪು ದಿಢೀರ್ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.
ಸ್ಥಳೀಯರೊಬ್ಬರು ಓರ್ವನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದು, ನಾಪತ್ತೆಯಾಗಿರುವ ಮತ್ತಿಬ್ಬರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಕೊಟ್ಟಾಯಂ ಜಿಲ್ಲೆಯ ಟೀಕೋಯ್ ಬಳಿ ಭಾರಿ ಭೂಕುಸಿತ ಸಂಭವಿಸಿದ್ದು, ಸ್ಕೂಟರ್‌ನಲ್ಲಿ ವಾಗಮೋನ್‌ನಿಂದ ಹಿಂತಿರುಗುತ್ತಿದ್ದ ಚೆನ್ನೈನ ಜವಾಹರ್ ನಗರ ನಿವಾಸಿ ಸಂಗೀತಾ ಅರುಲ್ ಲಾಲ್ (35) ಎಂಬ ಮಹಿಳೆ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಆಕೆಯ ಸ್ನೇಹಿತ ಗಾಯಗಳೊಂದಿಗೆ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರಿನಲ್ಲಿ ಶೆಡ್ ಒಂದರಲ್ಲಿ ಆಶ್ರಯ ಪಡೆದಿದ್ದ ಮೂವರ ಮೇಲೆ ಬೆಟ್ಟದ ಮಣ್ಣು ಕುಸಿದುಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಕೇರಳದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಅತ್ಯಂತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಿಶೇಷವಾಗಿ ತೀವ್ರ ಹಾನಿಗೊಳಗಾಗಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.




