ಸುಳ್ಯ: ಹಿಲ್ ಸೈಡ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್:
ಅಪಾರ ಹಾನಿ
ಸುಳ್ಯ: ಜಟ್ಟಿಪಳ್ಳ ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ಹಿಲ್ ಸೈಡ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಜನವರಿ 1 ರಂದು ರಾತ್ರಿ 10.30 ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆಗೆ ಮಾಲಕರು ಸಂಸ್ಥೆಯನ್ನು ಬಂದು ಮಾಡಿ ಮನೆಗೆ ತೆರಳಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಬಾರಿನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ಅಲ್ಲೇ ಪಕ್ಕದಲ್ಲಿ ಇರುವ ಕಟ್ಟಡದಲ್ಲಿ ತಂಗುತ್ತಿದ್ದು, ಅವರಲ್ಲಿ ಓರ್ವ 10:45ರ ವೇಳೆ ಬಾರಿನ ಹೊರಭಾಗದಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ಒಳಭಾಗದಿಂದ ಭಾರಿ ಗಾತ್ರದ ಹೊಗೆಯಾಡುವ ದೃಶ್ಯ ಕಂಡುಬಂದಿದೆ. ಆತ ಕೂಡಲೇ ಮಾಲಕರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಅವರು ಕೂಡಲೇ ಸ್ಥಳಕ್ಕೆ ಬಂದು ಬಾರಿನ ಬಾಗಿಲು ತೆಗೆದು ಒಳಗೆ ನೋಡಿದಾಗ ಒಳಭಾಗದಲ್ಲಿ ಬೆಂಕಿ ಆವರಿಸಿರುವ ದೃಶ್ಯ ಕಂಡುಬಂದಿದೆ.
ಕ್ಯಾಶ್ ಕೌಂಟರಿನ ಮೇಲ್ಭಾಗದಲ್ಲಿ ದೇವರ ಫೋಟೋ ಇದ್ದು, ಅಲ್ಲೇ ಪಕ್ಕದಲ್ಲಿ ಸಂಸ್ಥೆಗೆ ವಿದ್ಯುತ್ ಸಂಪರ್ಕ ನೀಡುವ ಡಿಪಿ ಸ್ವಿಚ್ ಅಳವಡಿಸಲಾಗಿತ್ತು. ಡಿಪಿ ಸ್ವಿಚ್ ಬೋರ್ಡ್ ನಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಲ್ಲೇ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದ ಮೋನಿಟರ್, ಡಿವಿಆರ್, ಮದ್ಯದ ಬಾಟಲಿ ಜೋಡಿಸಿಟ್ಟಿದ್ದ ಸೆಲ್ಫ್, ಕ್ಯಾಶ್ ಕೌಂಟರ್, ಹಾಗೂ ಮೇಲ್ಚಾವಣಿಗೆ ಬೆಂಕಿ ಆವರಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ಕೂಡಲೇ ಸಂಸ್ಥೆಯ ಮಾಲಕ ತಮ್ಮ ಸಿಬ್ಬಂದಿಗಳನ್ನು ಸೇರಿಸಿ ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಬೆಲೆಬಾಳುವ ಸಾಮಾಗ್ರಿಗಳು ಸುಟ್ಟು ಹೋಗಿ ನಷ್ಟಉಂಟಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.





