ಬೆಳ್ತಂಗಡಿ: ವಿವಾಹಿತ ಮಹಿಳೆಯ ಅತ್ಯಾಚಾರ: ಅಂಚೆ ವಿತರಕ ಸುರೇಶ್ ಬಂಧನ
ಬೆಳ್ತಂಗಡಿ: ವಿವಾಹಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಗ್ರಾಮೀಣ ಅಂಚೆ ವಿತರಕನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಕಳೆಂಜ ಗ್ರಾಮದ ಕುತ್ತೋಡಿ ನಿವಾಸಿ ಹಾಗೂ ಅರಸಿನಮಕ್ಕಿ ಗ್ರಾಮೀಣ ಅಂಚೆ ವಿತರಕ ಸುರೇಶ್(35) ಬಂಧಿತ ಆರೋಪಿ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ವಿವಾಹಿತ ಮಹಿಳೆಯೊಬ್ಬರು ‘2023ರ ಡಿಸೆಂಬರ್‌ನಲ್ಲಿ ಸುರೇಶ್ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ’ ಎಂದು ಆರೋಪಿಸಿ 2026ರ ಜೂನ್ 7ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಜೂನ್ 8ರಂದು ರಾತ್ರಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಯ ಬಳಿಕ ಜೂನ್ 9ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.




