June 12, 2026

ಕೋಟ: ತೇಜಸ್ ಶೆಟ್ಟಿ ಅಪಹರಣ, ಕೊಲೆ ಪ್ರಕರಣ: ರೌಡಿ ಶೀಟರ್ ಮನೋಜ್ ಕೋಡಿಕೆರೆ, ಚೇತು ಪಡೀಲ್ ಬಂಧನ

0
image_editor_output_image1996721356-1781254212653.jpg

ಕೋಟ: ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳ ಪತ್ತೆಗೆ ಸಹಕಾರಿಯಾದ ಮಹತ್ವದ ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸರು ಘೋಷಿತ ನಗದು ಬಹುಮಾನವನ್ನು ವಿತರಿಸಿದ್ದಾರೆ.

ಕುತ್ಯಾತ ರೌಡಿ ಶೀಟರ್ ಮನೋಜ್ ಕೋಡಿಕೆರೆ ಹಾಗೂ ಚೇತನ್ ಯಾನೆ ಚೇತು ಪಡೀಲ್ ಬಂಧಿತ ಪ್ರಮುಖ ಆರೋಪಿಗಳು.

ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ತಾನದಲ್ಲಿ 2025ರ ನವೆಂಬರ್ 19ರಂದು ಸಿದ್ದಾಪುರ ನಿವಾಸಿ ಮೋಹನದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಅವರನ್ನು ದುಷ್ಕರ್ಮಿಗಳ ತಂಡವೊಂದು ಸಿನಿಮೀಯ ಶೈಲಿಯಲ್ಲಿ ಅಪಹರಿಸಿತ್ತು.

ಬಳಿಕ ತೇಜಸ್ ತಂದೆ ಹಾಗೂ ಸ್ನೇಹಿತರಿಗೆ ಕರೆ ಮಾಡಿದ್ದ ಅಪಹರಣಕಾರರು ಆರಂಭದಲ್ಲಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅನಂತರ ಬೇಡಿಕೆಯನ್ನು ಬರೋಬ್ಬರಿ 3 ಕೋಟಿ ರೂಪಾಯಿಗೆ ಹೆಚ್ಚಿಸಿ, ಒಂದು ವೇಳೆ ಹಣ ನೀಡದಿದ್ದಲ್ಲಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡುವುದಾಗಿ ಕರಾವಳಿಯ ಉದ್ಯಮಿಗಳಿಗೆ ಭೂಗತ ಲೋಕದ ಶೈಲಿಯಲ್ಲಿ ಬೆದರಿಕೆ ಹಾಕಿದ್ದರು.

ಪ್ರಕರಣದ ಗಂಭೀರತೆ ಅರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ, ಈ ಇಡೀ ಕಿಡ್ನಾಪ್ ಸಂಚಿನ ಹಿಂದೆ ಮನೋಜ್ ಕೋಡಿಕೆರೆಯ ಮಾಸ್ಟರ್ ಮೈಂಡ್ ಇರುವುದು ಬೆಳಕಿಗೆ ಬಂದಿತ್ತು. ಆತನ ಸೂಚನೆಯಂತೆ ಸಹಚರರು ಈ ಕೃತ್ಯ ಎಸಗಿದ್ದರು.

ಈ ಸಂಬಂಧ ಈಗಾಗಲೇ ದೇವಿಪ್ರಸಾದ್ ಶೆಟ್ಟಿ, ಸುಜಿತ್ ಅಂಜಾರು, ಸುದೀಪ್ ಕಾಟಿಪಾಳ್ಯ, ಶ್ರೀಷಾ ಶೆಟ್ಟಿ ಕೃಷ್ಣಾಪುರ, ಮಿಥುನ್ ಕಾಟಿಪಾಳ್ಯ, ಸುಹಾಸ್ ಕೆಮ್ಮಣ್ಣು ಹಾಗೂ ಮನೋಜ್ ವಿ. ಕೊಟ್ಯಾನ್ ಹೂಡೆ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸಂಘಟಿತ ಅಪರಾಧ ಹಿನ್ನೆಲೆಯಲ್ಲಿ ಇವರ ವಿರುದ್ಧ ಕೋಕಾ ಕಾಯ್ದೆ ಜಡಿಯಲಾಗಿತ್ತು.

ಪ್ರಕರಣದ ಕಿಂಗ್‌ಪಿನ್‌ಗಳಾದ ಮನೋಜ್ ಕೋಡಿಕೆರೆ ಮತ್ತು ಚೇತನ್ ಪಡೀಲ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದರು. ಇವರ ಪತ್ತೆಗಾಗಿ ಪೊಲೀಸರು ನಗದು ಬಹುಮಾನ ಘೋಷಿಸಿದ್ದರು. ಸಾರ್ವಜನಿಕರಿಂದ ಸಿಕ್ಕ ಖಚಿತ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು, ಏಪ್ರಿಲ್ 30ರಂದು ಚೇತು ಪಡೀಲ್‌ನನ್ನು ಹಾಗೂ ಜೂನ್ 11ರಂದು ಕರಾವಳಿಯ ಮೋಸ್ಟ್ ವಾಂಟೆಡ್ ಮನೋಜ್ ಕೋಡಿಕೆರೆಯನ್ನು ಹೆಡೆಮುರಿ ಕಟ್ಟಿದ್ದಾರೆ. ಮಾಹಿತಿ ನೀಡಿದ ಸಾರ್ವಜನಿಕರಿಗೆ ಪೊಲೀಸರು ಗೌಪ್ಯವಾಗಿ ನಗದು ಬಹುಮಾನ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!