ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಕೃತಿ ರಮಣೀಯ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಘಾಟಿಯಲ್ಲಿ ಸದ್ಯ ಮಳೆಗಾಲದ ವಾತಾವರಣ ಇರುವುದರಿಂದ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆಯ ಬಗ್ಗೆ ಅರಣ್ಯ ಇಲಾಖೆ ತೀವ್ರ ಆತಂಕ ಹಾಗೂ ಎಚ್ಚರಿಕೆ ವ್ಯಕ್ತಪಡಿಸಿದೆ.
ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಗೆ ಒಳಪಡುವ ಈ ಘಾಟಿ ರಸ್ತೆಯ ತಿರುವೊಂದರ ತಡೆಗೋಡೆಯ ಸಮೀಪ ಚಿರತೆ ಆರಾಮವಾಗಿ ಕುಳಿತಿರುವ ದೃಶ್ಯ ಕಂಡುಬಂದಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಮುಂಗಾರು ಮಳೆ ಆರಂಭವಾಗಿರುವುದರಿಂದ ವೀಕೆಂಡ್‌ನಲ್ಲಿ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಘಾಟಿ ಪ್ರದೇಶದಲ್ಲಿ ಪ್ರಸ್ತುತ ಮುಂಗಾರು ಮಳೆ ಚುರುಕಾಗಿದ್ದು, ರಸ್ತೆಯುದ್ದಕ್ಕೂ ದಟ್ಟವಾದ ಮಂಜು ಮುಸುಕುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ರಸ್ತೆಯ ದೃಶ್ಯತೆ ತೀರಾ ಕಡಿಮೆಯಾಗುತ್ತಿದೆ.
ಅಂದ್ರೆ ಮಂಜು ಕವಿದ ವಾತಾವರ ಇರುವಾಗ ಬಹಳ ದೂರದ ವಸ್ತುಗಳು ಸಾಮಾನ್ಯವಾಗಿ ಮಬ್ಬಾಗಿ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿ ಅಥವಾ ಅರಣ್ಯ ಪ್ರದೇಶದ ಸಮೀಪ ಕಾಡುಪ್ರಾಣಿಗಳ ಚಲನೆ ತಕ್ಷಣ ಗಮನಕ್ಕೆ ಬಾರದಿರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಫೋಟೋ ಅಥವಾ ಸೆಲ್ಫಿ ಪಡೆಯಲು ವಾಹನದಿಂದ ಇಳಿಯುವ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.




