ಪುತ್ತೂರು ವಂಚನೆ ಪ್ರಕರಣ: ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕೆ ಆರೋಪಿ ಕೃಷ್ಣ ರಾವ್ ಪರ ವಕೀಲರ ಪ್ರಸ್ತಾಪ; ಜೂನ್ 19ಕ್ಕೆ ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಲು ಹೈಕೋರ್ಟ್ ಆದೇಶ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡರೊಬ್ಬರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಪ್ರಸ್ತಾಪವನ್ನು ಆರೋಪಿ ಪರ ಹಿರಿಯ ವಕೀಲರು ಹೈಕೋರ್ಟ್ ಮುಂದೆ ಮಂಡಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ತನಿಖೆಗೆ ತಡೆ ಕೋರಿ ಆರೋಪಿ ಕೃಷ್ಣ ಜೆ. ರಾವ್ ಸಲ್ಲಿಸಿರುವ ರಿಟ್ ಅರ್ಜಿಯು ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಕೃಷ್ಣ ರಾವ್ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರು, “ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಸಿದ್ಧರಿದ್ದು, ಈ ಪ್ರಸ್ತಾಪವನ್ನು ಪರಿಗಣಿಸಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆರೋಪಿ ಪರ ವಕೀಲರ ಪ್ರಸ್ತಾಪವನ್ನು ಮಾನ್ಯ ಪೀಠವು ಪರಿಗಣಿಸಿದೆ. ಇದೇ ಜೂನ್ 19ರಂದು ಸಂತ್ರಸ್ತೆ, ಆರೋಪಿ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖರು ಹೈಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ (Mediation Centre) ಕಡ್ಡಾಯವಾಗಿ ಹಾಜರಾಗಬೇಕು ಎಂದು ನ್ಯಾಯಪೀಠವು ಮಹತ್ವದ ಸೂಚನೆ ನೀಡಿದೆ. ತದನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ.




