July 27, 2026

ಬೆಳ್ತಂಗಡಿ: ಯುವಕನ ಮೃತದೇಹ ಪತ್ತೆ ಪ್ರಕರಣ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಹಲ್ಲೆ ದೃಶ್ಯ: ಮೂವರು ಆರೋಪಿಗಳ ಬಂಧನ!

0
image_editor_output_image305015606-1780389288399.jpg

ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಸೋಮವಾರ ಯುವಕನೋರ್ವನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮೃತ ಯುವಕನ ಮೇಲೆ ಭಾನುವಾರ ಮೂವರು ವ್ಯಕ್ತಿಗಳು ಸೇರಿಕೊಂಡು ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಕೊಲೆ ಆರೋಪದಡಿ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ (33 ವರ್ಷ) ಕೊಲೆಯಾದ ದುರ್ದೈವಿ ಯುವಕನಾಗಿದ್ದಾನೆ. ಈತನ ಕೊಲೆ ಆರೋಪದ ಮೇಲೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35 ವರ್ಷ), ಕಡಬ ತಾಲೂಕಿನ ಚಾರ್ವಾಕ ನಿವಾಸಿ ಮೋಹನ್ (30 ವರ್ಷ) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54 ವರ್ಷ) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಯುವಕನ ಶವ ಪತ್ತೆಯಾದಾಗ, ಸ್ಥಳೀಯರು ಮೃತದೇಹದ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಮತ್ತು ಮಾಹಿತಿ ಮೃತ ಯತೀಶನ ಸಹೋದರ ನಿತಿನ್ ಅವರ ಮೊಬೈಲ್‌ಗೆ ತಲುಪಿದೆ. ಭಾವಚಿತ್ರದಲ್ಲಿದ್ದ ವ್ಯಕ್ತಿ ತನ್ನ ಸ್ವಂತ ಸಹೋದರ ಯತೀಶ್ ಎಂದು ಗುರುತಿಸಿದ ನಿತಿನ್, ತಕ್ಷಣವೇ ಈ ವಿಷಯವನ್ನು ಬೆಳ್ತಂಗಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಘಟನೆಯ ಬಳಿಕ ಪೊಲೀಸರು ಮತ್ತು ನಿತಿನ್ ಅವರು ಸ್ಥಳದ ಬಳಿ ಇದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿದ್ದಾರೆ. ಭಾನುವಾರ ರಾತ್ರಿ ಆರೋಪಿಗಳಾದ ಯಶೋಧರ, ಇಬ್ರಾಹಿಂ ಹಾಗೂ ಮೋಹನ್ ಮೂವರೂ ಸೇರಿಕೊಂಡು ಯತೀಶ್‌ಗೆ ಮನಬಂದಂತೆ ಭೀಕರವಾಗಿ ಹಲ್ಲೆ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ಹಲ್ಲೆಯ ತೀವ್ರತೆಯಿಂದಾಗಿಯೇ ಯತೀಶ್ ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತ ಯುವಕನ ಸಹೋದರ ನಿತಿನ್ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್‌ 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು/ಹಲ್ಲೆ) ಹಾಗೂ ಸೆಕ್ಷನ್‌ 103 (ಕೊಲೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸದ್ಯಕ್ಕೆ ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಕೊಲೆಗೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!