ಮಂಗಳೂರು: ಬಸ್ಸಿನಿಂದ ಬಿದ್ದ ಮಹಿಳೆ, ಮಗುವಿನ ರಕ್ಷಣೆಗೆ ಧಾವಿಸಿದ ಖಾಸಗಿ ಬಸ್ ನ ಚಾಲಕ, ನಿರ್ವಾಹಕ
ಮಂಗಳೂರು: ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ ಮಹಿಳೆ ಮತ್ತು ಮಗುವನ್ನು ಸಕಾಲದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಖಾಸಗಿ ಬಸ್ ಚಾಲಕ ಮತ್ತು ನಿರ್ವಾಹಕ ಮಾನವೀಯತೆ ಮೆರೆದ ಘಟನೆ ಮರಕಡ ಜಂಕ್ಷನ್‌ನಲ್ಲಿ ಸಂಭವಿಸಿದೆ.
13B ‘ಮಾಸ್ಟರ್’ ಹೆಸರಿನ ಬಸ್ಸಿನ ಚಾಲಕ ದಯಾನಂದ್ ಮತ್ತು ನಿರ್ವಾಹಕ ಸಂದೀಪ್ ಅವರ ಈ ಸಮಯಪ್ರಜ್ಞೆಯ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮರಕಡ ಜಂಕ್ಷನ್‌ನಲ್ಲಿ ಬೇರೊಂದು ಬಸ್ಸಿನಿಂದ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಾಯಿ-ಮಗು ಇಬ್ಬರಿಗೂ ಗಾಯಗಳಾಗಿತ್ತು, ಇದೇ ವೇಳೆ ಅದೇ ರಸ್ತೆಯಲ್ಲಿ ಮಂಗಳೂರು ಕಡೆಗೆ 13B ಮಾರ್ಗದ ‘ಮಾಸ್ಟರ್’ ಹೆಸರಿನ ಖಾಸಗಿ ಬಸ್ ಬರುತ್ತಿತ್ತು. ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಮಹಿಳೆ ಮತ್ತು ಮಗುವನ್ನು ನೋಡಿದ ಬಸ್ ಸಿಬ್ಬಂದಿ ತಕ್ಷಣವೇ ಅಲರ್ಟ್ ಆಗಿದ್ದಾರೆ.
ಸಾಮಾನ್ಯವಾಗಿ ನಿಗದಿತ ಸಮಯಕ್ಕೆ ತಲುಪಬೇಕಾದ ಒತ್ತಡದಲ್ಲಿರುವ ಖಾಸಗಿ ಬಸ್ ಸಿಬ್ಬಂದಿ, ಇಲ್ಲಿ ತಮ್ಮ ರೂಟಿನ ಟ್ರಿಪ್ ಅಥವಾ ಸಮಯದ ಬಗ್ಗೆ ಕಿಂಚಿತ್ತೂ ಯೋಚಿಸಲಿಲ್ಲ. ತಕ್ಷಣವೇ ತಮ್ಮ ಬಸ್ಸನ್ನು ನಿಲ್ಲಿಸಿ, ಅದರಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಅವರನ್ನು ಬೇರೆ ಬಸ್ಸಿನಲ್ಲಿ ಸುರಕ್ಷಿತವಾಗಿ ಕಳುಹಿಸಿಕೊಟ್ಟರು.
ಬಳಿಕ ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು 13B ಬಸ್ಸಿನಲ್ಲಿಯೇ ಅತ್ಯಂತ ತುರ್ತಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಬಸ್ ಸಿಬ್ಬಂದಿಯಾದ ದಯಾನಂದ್ ಮತ್ತು ಸಂದೀಪ್ ಅವರ ಈ ತಕ್ಷಣದ ನಿರ್ಧಾರ ಮತ್ತು ಕರ್ತವ್ಯಕ್ಕಿಂತ ಮಾನವೀಯತೆ ದೊಡ್ಡದು ಎಂದು ಸಾಬೀತುಪಡಿಸಿದ ಗುಣಕ್ಕೆ ಸಾರ್ವಜನಿಕರು ಹಾಗೂ ಪ್ರತ್ಯಕ್ಷದರ್ಶಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.





