ಮಂಗಳೂರು: ಕೊಲೆ, ದರೋಡೆ ಪ್ರಕರಣ: ತಲೆಮರೆಸಿಕೊಂಡಿರುವ ಆರೋಪಿಯ ಬಂಧನ
ಮಂಗಳೂರು: ಕುಳಾಯಿ ಹೊಸಬೆಟ್ಟುವಿನಲ್ಲಿ 2014ರಲ್ಲಿ ನಡೆದಿದ್ದ ಸುಮತಿ ಪ್ರಭು ಎಂಬವರ ಭೀಕರ ಕೊಲೆ ಮತ್ತು ದರೋಡೆ ಪ್ರಕರಣದ ತಲೆಮರೆಸಿಕೊಂಡಿರುವ ಎರಡನೇ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ಮೂಲದ ಬಹುದ್ದೂರ್ ಸಿಂಗ್ @ ಬುಯ್ಯ (45) ಬಂಧಿತ ಆರೋಪಿ.ಸ್ಥಳೀಯ ಮಾರ್ಗದರ್ಶಿ
2014ರ ಫೆಬ್ರುವರಿ 8ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಸುಮತಿ ಪ್ರಭು ಅವರನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಅವರ ಮೈಮೇಲಿದ್ದ ಸುಮಾರು 3.80 ಲಕ್ಷ ರೂಪಾಯಿ ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಒಡವೆಗಳನ್ನು ದೋಚಲಾಗಿತ್ತು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಕೊಲೆ ಮತ್ತು ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ರಾಜಸ್ಥಾನದ ಶಿವರಾಮ್, ಬಹುದ್ದೂರ್ ಸಿಂಗ್ ಮತ್ತು ಉತ್ತರ ಪ್ರದೇಶದ ಶಹನ್ವಾಜ್ ಎಂಬವರನ್ನು ದಸ್ತಗಿರಿ ಮಾಡಿದ್ದರು.





