ಕಲ್ಲುಗುಂಡಿಯಲ್ಲಿ ಮಾದರಿ ಮದುವೆ ಸಮಾರೋಪ ಸಮಾರಂಭದ ಪ್ರಚಾರಾರ್ಥ ತಂಪುಪಾನೀಯ ವಿತರಣೆ
ಕಲ್ಲುಗುಂಡಿ: ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವ ಮಾದರಿ ಮದುವೆ ಅಭಿಯಾನದ ಸಮಾರೋಪ ಸಮಾವೇಶವು ಮೇ 2ರಂದು ಪುತ್ತೂರಿನಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ, ಅದರ ಪ್ರಚಾರಾರ್ಥ ಕಲ್ಲುಗುಂಡಿಯಲ್ಲಿ ಎಸ್ಸೆಸ್ಸೆಫ್, ಎಸ್ ವೈ ಎಸ್ ಹಾಗೂ ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಯುನಿಟ್ ವತಿಯಿಂದ ತಂಪುಪಾನೀಯ ವಿತರಣೆ ಕಾರ್ಯಕ್ರಮ ನಡೆಯಿತು.

ಮದುವೆ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು, ದುಂದುವೆಚ್ಚಗಳು ಹಾಗೂ ಅನಿಸ್ಲಾಮಿಕ ಚಟುವಟಿಕೆಗಳನ್ನು ನಿವಾರಿಸಿ, ಸಮಾಜದಲ್ಲಿ ಮಾದರಿ ಮದುವೆಯ ಕುರಿತ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ, ಮೇ 2ರಂದು ಸಂಜೆ 4:00 ಗಂಟೆಗೆ ಪುತ್ತೂರಿನ ದರ್ಬೆ ವೃತ್ತದಿಂದ ಕಿಲ್ಲೆ ಮೈದಾನವರೆಗೆ ಭವ್ಯ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಈ ಐತಿಹಾಸಿಕ ಜಾಥಾದಲ್ಲಿ ಸುನ್ನಿ ಸಂಘ ಕುಟುಂಬದ ನಾಯಕರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ನಂತರ ಸಂಜೆ 6:00 ಗಂಟೆಗೆ ಕಿಲ್ಲೆ ಮೈದಾನದಲ್ಲಿ ಸಮಾರೋಪ ಸಮ್ಮೇಳನ ನಡೆಯಲಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೇಖುನಾ ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ, ಕರ್ನಾಟಕ ಜಂಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಹಾಗೂ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ, ಮಾದರಿ ಮದುವೆಯ ಮಹತ್ವದ ಕುರಿತು ಪ್ರವಚನ ನೀಡಲಿದ್ದಾರೆ. ಹಲವಾರು ಉಲಮಾ-ಉಮರಾ ನಾಯಕರು, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಇದರ ಪ್ರಚಾರಾರ್ಥ ನಡೆದ ಕಲ್ಲುಗುಂಡಿ ತಂಪುಪಾನೀಯ ವಿತರಣಾ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ನಾಯಕರಾದ ಫೈಝಲ್ ಝುಹ್ರಿ, ಎಸ್ಸೆಸ್ಸೆಫ್ ಕಲ್ಲುಗುಂಡಿ ಯುನಿಟ್ ಅಧ್ಯಕ್ಷ ಆಶಿಕ್ ಕೆ.ಎಚ್., ಕೋಶಾಧಿಕಾರಿ ಹಸೈನ್ ಚಟ್ಟೆಕ್ಕಲ್ಲು, ಜಲೀಲ್ ಭಾರತ್, ಸ್ವಾದಿಕ್ ಚಟ್ಟೆಕ್ಕಲ್ಲು ನೇತೃತ್ವ ವಹಿಸಿದ್ದರು.





