ಉಡುಪಿ: ತಾಯಿ, ಮಗಳ ಹತ್ಯೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ
ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆತ್ರಾಡಿ ಮದಗದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ತಾಯಿ ಮತ್ತು ಮಗಳ ಹತ್ಯೆ ಪ್ರಕರಣದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಗುರುವಾರ ಮಹತ್ವದ ತೀರ್ಪು ನೀಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಹರೀಶ್ ಆರ್. ಅಲಿಯಾಸ್ ಗಣೇಶ (33) ಶಿಕ್ಷೆಗೆ ಗುರಿಯಾದ ಆರೋಪಿ.
ತಮಿಳುನಾಡು ಮೂಲದ ಚೆಲುವಿ (30) ಎಂಬವರೊಂದಿಗೆ ಸಂಬಂಧ ಹೊಂದಿದ್ದ ಹರೀಶ್, ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ಚೆಲುವಿ ಬೇರೆಯವರೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಾಳೆ ಎಂಬ ಸಂಶಯದಿಂದ ದ್ವೇಷ ಬೆಳೆಸಿಕೊಂಡಿದ್ದ ಈತ, 2022ರ ಮೇ 8ರಂದು ರಾತ್ರಿ ಕೃತ್ಯ ಎಸಗಿದ್ದ.
ಅಂದು ರಾತ್ರಿ ಚೆಲುವಿ ಮನೆಯಲ್ಲಿ ಮಗಳೊಂದಿಗೆ ಇದ್ದಾಗ ಬಂದ ಹರೀಶ್, ಜಗಳ ತೆಗೆದು ಆಕೆಯನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಈ ವೇಳೆ ನಿದ್ರೆಯಲ್ಲಿದ್ದ ಮಗಳು ಪ್ರಿಯಾ ಎಚ್ಚರಗೊಂಡು ತನ್ನ ವಿರುದ್ಧ ಸಾಕ್ಷಿ ಹೇಳಬಹುದು ಎಂಬ ಭೀತಿಯಿಂದ, ಆ ಮಗುವನ್ನೂ ಕೂಡ ಶಾಲಿನಿಂದ ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಪ್ರಕರಣದ ತನಿಖೆ ನಡೆಸಿದ್ದ ಆಗಿನ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರು ಆರೋಪಿಯನ್ನು ಬಂಧಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. . ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.





