ಬೆಳ್ತಂಗಡಿ: ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನ: ಐದು ಕಾಣಿಕೆ ಹುಂಡಿಗಳನ್ನು ಹೊತ್ತೊಯ್ದ ಕಳ್ಳರು
ಬೆಳ್ತಂಗಡಿ: ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಮಂಗಳವಾರ ತಡರಾತ್ರಿ ಕಳ್ಳತನ ನಡೆದಿದ್ದು, ಕಳ್ಳರು ದೇವಸ್ಥಾನದ ಐದು ಕಾಣಿಕೆ ಹುಂಡಿಗಳನ್ನು ಹೊತ್ತೊಯ್ದ ಕಳ್ಳರು, ನೇತ್ರಾವತಿ ನದಿ ತೀರದಲ್ಲಿ ಅವುಗಳನ್ನು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಏಪ್ರಿಲ್ 21ರ ರಾತ್ರಿ ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ದೇವಸ್ಥಾನದ ಬಾಗಿಲು ಹಾಕಿ ಸಿಬ್ಬಂದಿಗಳು ತೆರಳಿದ್ದರು. ಇಂದು (ಏಪ್ರಿಲ್ 22) ಮುಂಜಾನೆ ಸಿಬ್ಬಂದಿಗಳು ದೇವಸ್ಥಾನಕ್ಕೆ ಆಗಮಿಸಿದಾಗ ಮುಖ್ಯ ದ್ವಾರದ ಬಾಗಿಲು ಮುರಿದಿರುವುದು ಕಂಡುಬಂದಿದೆ.
ತಕ್ಷಣ ಒಳಗೆ ಹೋಗಿ ಪರಿಶೀಲಿಸಿದಾಗ ದೇವಸ್ಥಾನದ ಆವರಣದಲ್ಲಿದ್ದ 5 ಕಾಣಿಕೆ ಹುಂಡಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಳ್ಳರು ದೇವಸ್ಥಾನದಿಂದ ಹುಂಡಿಗಳನ್ನು ಹೊತ್ತುಕೊಂಡು ಮುಂಭಾಗದಲ್ಲೇ ಹರಿಯುವ ನೇತ್ರಾವತಿ ನದಿ ತೀರಕ್ಕೆ ಹೋಗಿದ್ದಾರೆ.
ಅಲ್ಲಿ ಹುಂಡಿಗಳನ್ನು ಬಲವಂತವಾಗಿ ಹೊಡೆದು ಅದರಲ್ಲಿದ್ದ ನಗದು ಹಣವನ್ನು ಸಂಗ್ರಹಿಸಿ, ಖಾಲಿ ಹುಂಡಿಗಳನ್ನು ನದಿ ತೀರದಲ್ಲೇ ಎಸೆದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ.





