April 16, 2026

ಉಡುಪಿ: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image-895011756-1776321537572.jpg

ಉಡುಪಿ: ಕಳೆದ 23 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಬೆಂಗಳೂರಿನ ಶಿವನಗರ ನಿವಾಸಿ ಮೊಹಮ್ಮದ್ ಎಂಬವರ ಪುತ್ರ ಎಂ. ಬಾಬು (52) ಎಂದು ಗುರುತಿಸಲಾಗಿದೆ.

ಈತ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣವೊಂದರ ಆರೋಪಿಯಾಗಿದ್ದನು.

ಬಾಬು ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 326 ಜೊತೆಗೆ 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಚಾರ್ಜ್‌ಶೀಟ್‌ನಲ್ಲಿ ನಮೂದಿಸಲಾಗಿತ್ತು. ಕಳೆದ ಎರಡು ದಶಕಗಳಿಂದಲೂ ಈತ ಪೊಲೀಸರಿಗೆ ಸಿಗದೆ ಕೋರ್ಟ್‌ಗೆ ಹಾಜರಾಗದೆ ತಪ್ಪಿಸಿಕೊಂಡಿದ್ದನು.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಮಲ್ಪೆ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಮಲ್ಪೆ ಉಪನಿರೀಕ್ಷಕ (ಕಾನೂನು ಮತ್ತು ಸುವ್ಯವಸ್ಥೆ) ಅನಿಲ್ ಕುಮಾರ್ ಡಿ. ನೇತೃತ್ವದ ತಂಡವು ಕಳೆದ ಐದು ತಿಂಗಳಿನಿಂದ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸಿತ್ತು.

ಖಚಿತ ಮಾಹಿತಿಯ ಮೇರೆಗೆ ಹೆಡ್ ಕಾನ್‌ಸ್ಟೆಬಲ್‌ಗಳಾದ ಸುರೇಶ್ ಕುಮಾರ್ ಮತ್ತು ವಿಶ್ವನಾಥ್ ಎಚ್. ಅವರು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಆತನನ್ನು ಪತ್ತೆಹಚ್ಚಿದ್ದಾರೆ. ಏಪ್ರಿಲ್ 12 ರಂದು ಬೆಂಗಳೂರಿಗೆ ತೆರಳಿದ್ದ ಪೊಲೀಸ್ ತಂಡವು ಏಪ್ರಿಲ್ 14 ರಂದು ಆರೋಪಿಯನ್ನು ವಶಕ್ಕೆ ಪಡೆದಿದೆ.

ಬಂಧಿತ ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ಏಪ್ರಿಲ್ ೨೮ ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!