ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದವನ್ನು ಸ್ಥಗಿತಗೊಳಿಸಿದ ಇಟಲಿ
ಇರಾನ್ ಜೊತೆಗಿನ ಸಂಘರ್ಷದ ಬೆನ್ನಲ್ಲೇ, ಇಸ್ರೇಲ್ ಜೊತೆಗಿನ ತನ್ನ ರಕ್ಷಣಾ ಒಪ್ಪಂದವನ್ನು ಇಟಲಿ ಸ್ಥಗಿತಗೊಳಿಸಿದೆ. ಇದು ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನ ಸಂಶೋಧನೆಯ ವಿನಿಮಯವನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ರಾಜತಾಂತ್ರಿಕ ಮೂಲಗಳು ಮಂಗಳವಾರ ತಿಳಿಸಿವೆ.
‘ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ ಜೊತೆಗಿನ ರಕ್ಷಣಾ ಒಪ್ಪಂದದ ಸ್ವಯಂಚಾಲಿತ ನವೀಕರಣವನ್ನು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ’ ಎಂದು ವೆರೋನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೆಲೋನಿ ಹೇಳಿದ್ದಾಗಿ ಇಟಾಲಿಯನ್ ಸುದ್ದಿ ಸಂಸ್ಥೆಗಳಾದ ANSA ಮತ್ತು AGI ವರದಿ ಮಾಡಿವೆ.
ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ. ‘ಇದನ್ನು ಮುಂದುವರಿಸುವುದು ರಾಜಕೀಯವಾಗಿ ಕಷ್ಟಕರವಾಗುತ್ತಿತ್ತು’ ಎಂದು ಇಟಾಲಿಯನ್ ರಾಜತಾಂತ್ರಿಕ ಮೂಲವೊಂದು AFPಗೆ ದೃಢಪಡಿಸಿದೆ.
2006ರಲ್ಲಿ ಇಸ್ರೇಲ್ ಜೊತೆಗೆ ಅನುಮೋದಿಸಿದ ಈ ಒಪ್ಪಂದವನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ.
ರಕ್ಷಣಾ ಕ್ಷೇತ್ರದಾದ್ಯಂತ ಸಹಕಾರ, ಮಿಲಿಟರಿ ಸಿಬ್ಬಂದಿ ಶಿಕ್ಷಣ ಮತ್ತು ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಹಕಾರ ಈ ಒಪ್ಪಂದದ ಅಡಿಯಲ್ಲಿ ಬರುತ್ತದೆ.




