ಸ್ನಾನದ ಕೋಣೆಯಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಯುವತಿ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯಲ್ಲಿ ಯುವತಿಯೊಬ್ಬಳು ಸ್ನಾನದ ಕೋಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.
ಕೆ.ಜಿ. ಶ್ರೀನಿವಾಸಪುರ ಗ್ರಾಮದ ನಿವಾಸಿ ಯಶಸ್ವಿನಿ (22) ಮೃತ ಯುವತಿ. ಈಕೆ ಕಳೆದ ಐದು ತಿಂಗಳಿನಿಂದ ದೊಡ್ಡಬಳ್ಳಾಪುರ ಹೊರವಲಯದಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಳು ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಪ್ರಯೋಜನಪಡಿಸಿಕೊಂಡು ಯಶಸ್ವಿನಿ ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ. ದಾಬಸ್‌ಪೇಟೆಯ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ತಂದು, ಮನೆಯ ಸ್ನಾನದ ಕೋಣೆಗೆ ತೆರಳಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಬೆಂಕಿಯ ತೀವ್ರತೆಗೆ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಆಗಲೇ ಯುವತಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದಳು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸೋಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.




