ಉಡುಪಿ: ಮೂವರು ರೌಡಿ ಶೀಟರ್ ಗಳ ಗಡಿಪಾರಿಗೆ ಆದೇಶ
ಉಡುಪಿ: ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಸಂದೇಶ, ಸುಶಾಂತ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಜಬ್ಬಾರ್ ಹುಸೇನ್ ಎಂಬವರ ವಿರುದ್ಧ ಮಾ.12 ರಂದು ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಉಡುಪಿ ಪೊಲೀಸ್ ಅಧೀಕ್ಷಕ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಈ ಪೈಕಿ ಕಾಪುವಿನ ನಾಡ್ಸಾಲು ಗ್ರಾಮದ ನಿವಾಸಿ ಜಬ್ಬಾರ್ ಹುಸೈನ್ ಎಂಬಾತನ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಈತನ ವಿರುದ್ಧ ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಹಾಗೂ ಮಂಗಳೂರ ನಗರದಲ್ಲಿ ಇದುವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿರುತ್ತದೆ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಸಂದೇಶ್ ಎಂಬಾತನ ವಿರುದ್ಧ 5 ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್ ತೆರೆಯಲಾಗಿದೆ. ಇನ್ನು ಹಿರಿಯಡ್ಕ ಠಾಣಾ ವ್ಯಾಪ್ತಿಯ ಸುಶಾಂತ್ ಎಂಬಾತನ ವಿರುದ್ಧ 3 ಪ್ರಕರಣ ದಾಖಲಾಗಿವೆ.
ಜಬ್ಬಾರ್ ಹುಸೈನ್ ನನ್ನು ಹಾಸನ ಜಿಲ್ಲೆಯ ಪೆನ್ನನ್ ಮೊಹಲ್ಲಾ ಠಾಣಾ ವ್ಯಾಪ್ತಿಗೆ, ಸಂದೇಶ್ ಎಂಬಾತನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಸುಶಾಂತ್ ಎಂಬಾತನನ್ನು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.




