ಬೆಳ್ತಂಗಡಿ: ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಸಾವಿನ ಪ್ರಕರಣ: ಮರು ತನಿಖೆಗೆ ಎಸ್ಐಟಿ ರಚಿಸಲು ಆದೇಶ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಸಾರಾ ಫಾರ್ಮ್ಸ್ ಉದ್ಯೋಗಿ ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆಗೆ ಎಸ್ ಐಟಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹೈಕೋರ್ಟ್ ಗರಂ ಆದ ಬೆನ್ನಲ್ಲೇ ಇದೀಗ ಎಸ್ ಐಟಿ ರಚನೆ ಮಾಡಿದ್ದು. ಬೆಳ್ತಂಗಡಿ ತಾಲೂಕಿನಲ್ಲಿ ಧರ್ಮಸ್ಥಳ ಪ್ರಕರಣದ ಬಳಿಕ ಇದೀಗ ಮತ್ತೊಂದು ಎಸ್ ಐಟಿ ರಚನೆಯಾಗಿದೆ.
ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ತಂಡದಲ್ಲಿ ಉಡುಪಿ ಜಿಲ್ಲಾ ಎಸ್.ಪಿ ಹರಿರಾವ್ ಶಂಕರ್ ಐಪಿಎಸ್, ಡಿವೈಎಸ್‌ಪಿ ಎಂಆರ್ ಹರೀಶ್ ಅವರಿದ್ದಾರೆ.
2022ರ ಡಿಸೆಂಬರ್ .18ರಂದು ಶಿಬಾಜೆಯಲ್ಲಿ ಕೆಲಸ ಮಾಡುತ್ತಿದ್ದ ತೋಟದ ಒಳಗೆ ಶ್ರೀಧರ ಅವರ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿರುವ ಆರೋಪ ಆರಂಭದಿಂದಲೂ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ದಲಿತ ಸಂಘಟನೆಗಳು ಬೃಹತ್ ಹೋರಾಟಗಳನ್ನು ನಡೆಸಿದ್ದರು. ಆದರೆ ಶ್ರೀಧರ ಅವರ ಕೊಲೆ ಪ್ರಕರಣದ ಆರೋಪಿಗಳು ಪತ್ತೆಯಾಗಲೇ ಇಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಾ ಫಾರ್ಮ್ಸ್ ಮ್ಯಾನೇಜರ್ ಹರೀಶ್ ಮುಗರೆ ಹೈಕೋರ್ಟ್ ನಲ್ಲಿ ರಿಚ್ ಅರ್ಜಿ ಸಲ್ಲಿಸಿದ್ದರು. ಶ್ರೀಧರ್ ಸಾವಿನ ಪ್ರಕರಣದ ಮರು ತನಿಖೆ ನಡೆಸಲು ರಾಜ್ಯ ಸರ್ಕಾರ ನಾಲ್ಕು ವಾರಗಳಲ್ಲಿ ಎಸ್ಐಟಿ ರಚನೆ ಮಾಡಬೇಕು.
ತನಿಖೆ ಆರಂಭಿಸಿದ ದಿನದಿಂದ ನಾಲ್ಕು ತಿಂಗಳಲ್ಲಿ ಸಂಬಂಧಿಸಿದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು’ ಎಂದು ಹೈಕೋರ್ಟ್, 2025ರ ಸೆಪ್ಟೆಂಬರ್ 9ರಂದು ಆದೇಶಿಸಿತ್ತು.
ಆದರೆ ಸರಕಾರ ಮಾತ್ರ ಹೈಕೋರ್ಟ್ ಆದೇಶಕ್ಕೆ ಕ್ಯಾರೆ ಅನ್ನದೇ ಸೈಲೆಂಟ್ ಆಗಿತ್ತು, ಇದೀಗ ಹೈಕೋರ್ಟ್ ಗರಂ ಆದ ಬಳಿಕ ರಾಜ್ಯ ಸರಕಾರ ಎಸ್ಐಟಿ ಮಾಡಿದೆ. ಇದರೊಂದಿಗೆ ಬೆಳ್ತಂಗಡಿಯಲ್ಲಿ ಎರಡು ಎಸ್ಐಟಿ ತನಿಖೆ ನಡೆಸುವಂತಾಗಿದೆ.




