March 18, 2026

ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ 16 ಮಂದಿ ಆಡಳಿತ ಮಂಡಳಿ ನಿರ್ದೇಶಕರ ಅಮಾನತು

0
image_editor_output_image-1091761183-1764227241627.jpg

ಮಂಗಳೂರು: ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ 16 ಮಂದಿ ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಅಮಾನತುಗೊಳಿಸಿ ಮೈಸೂರು ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಪ್ರಕರಣ 29ಸಿ ರಡಿ ಕ್ರಮ ಕೈಗೊಳ್ಳುವ ಬಗ್ಗೆ ಡಿ.ಲೋಕನಾಥ್ ಮತ್ತು ಇತರೆ ಐದು ಸದಸ್ಯರು 2024 ನ. 22 ರಂದು ಸಲ್ಲಿಸಿದ ದೂರು ಅರ್ಜಿಯ ವಿಚಾರಣೆ ನಡೆಸಿದ ಜಂಟಿ ನಿಬಂಧಕರು ಈ ಆದೇಶ ಹೊರಡಿಸಿದ್ದಾರೆ.

01-09-2024ರಂದು ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಬೈಲಾ ಸಮಗ್ರ ತಿದ್ದುಪಡಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದ್ದು, ಈ ಕ್ರಮದಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದಾಗಿ ದೂರು ಅರ್ಜಿದಾರರು ಆಕ್ಷೇಪಿಸಿ ಆಡಳಿತ ಮಂಡಳಿಯ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ದೂರು ನೀಡಲಾಗಿತ್ತು.

ಸಂಘದ ಬೈಲಾಗೆ ತರಲಾಗುತ್ತಿರುವ ತಿದ್ದುಪಡಿಯ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡದೇ ಸಭೆಯಲ್ಲಿ ತಿದ್ದುಪಡಿಯ ಬಗ್ಗೆ ಚರ್ಚಿಸಲು ಅವಕಾಶವನ್ನು ನೀಡದಿರುವುದು, ಸಂಘದ ಆಡಳಿತ ಮಂಡಳಿಯವರು ಸರ್ವ ಸದಸ್ಯರ ಸಭೆಯನ್ನು ನಡೆಸುವ ಪೂರ್ವದಲ್ಲಿ ಮತದಾನದ ಹಕ್ಕುಳ್ಳ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ಸಹಕಾರ ನಿಯಮ ಪಾಲಿಸುವಲ್ಲಿ ವಿಫಲರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಪ್ರಕರಣ 29ಸಿ(8)(ಬಿ)ರಡಿ ಹಾಗೂ ಸರ್ಕಾರದ ಅಧಿಸೂಚನೆ ಅನ್ವಯ ಸಂಖ್ಯೆ : ಸಿಒ/71/ಸಿಎಲ್‌ಎಂ/2016 ದಿನಾಂಕ: 06-12-2016ರ ರೀತ್ಯಾ ಪ್ರತ್ಯಾಯೋಜನೆಗೊಂಡ ಅಧಿಕಾರದ ಮೇರೆಗೆ ಸಿ.ಪ್ರಸಾದ್ ರೆಡ್ಡಿ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತ, ಮೈಸೂರು ಆವರು ಸಮಾಜ ಸೇವಾ ಸಹಕಾರಿ ಸಂಘದ 16 ನಿರ್ದೇಶಕರನ್ನು ಅಧಿಕಾರದಿಂದ ಅಮಾನತುಗೊಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!