ಮಲ್ಪೆ: ನೌಕಾ ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳ ಸೋರಿಕೆ: ಶಿಪ್ ಯಾರ್ಡ್‌ನ ಉದ್ಯೋಗಿಗ ರೋಹಿತ್, ಸಂತ್ರಿ ಬಂಧನ
ಉಡುಪಿ: ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಘಟಕದಲ್ಲಿ ಭಾರತದ ನೌಕಾ ಸೇನೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳು ಹಾಗೂ ಹಡಗುಗಳ ಸಂಖ್ಯೆಗಳ ವಿವರಗಳನ್ನು ವಾಟ್ಸಪ್ ಮೂಲಕ ಅನಧಿಕೃತವಾಗಿ ಹಂಚಿಕೊಂಡ ಪ್ರಕರಣದಲ್ಲಿ ಇಬ್ಬರು ಉತ್ತರಪ್ರದೇಶ ಮೂಲದ ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಶಿಪ್ ಯಾರ್ಡ್‌ನ ಉದ್ಯೋಗಿಗಳಾದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಬಂಧಿತರು.
ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಅಧೀನದಲ್ಲಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ M/S ಸೂಷ್ಮಾ ಮರೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಬ್‌ಕಾಂಟ್ರಾಕ್ಟಿನಡಿ ಕೆಲಸ ಮಾಡುತ್ತಿದ್ದ ಆರೋಪಿಗಳಲ್ಲಿ, ಇನ್ಸುಲೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತರ ಪ್ರದೇಶದ ಅನಂತರಾಮ್ ಭಟ್‌ಪುರ ರೋಹಿತ್ (29) ಮತ್ತು ಸುಲ್ತಾನ್‌ಪುರ ಜಿಲ್ಲೆಯ ಸಂತ್ರಿ (37) ಎಂದು ತಿಳಿದುಬಂದಿದೆ.
ಬಂಧಿತ ರೋಹಿತ್ ಹಿಂದಿನ ದಿನಗಳಲ್ಲಿ ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ನೌಕಾಸೇನೆಗೆ ಸಂಬಂಧಿಸಿದ ಹಡಗುಗಳ ಗೌಪ್ಯ ಸಂಖ್ಯೆಗಳು ಹಾಗೂ ಸೂಕ್ಷ್ಮ ಮಾಹಿತಿ ವಾಟ್ಸಪ್ ಮೂಲಕ ಅನಧಿಕೃತ ವ್ಯಕ್ತಿಗಳಿಗೆ ಹಂಚಿಕೊಂಡು ಅಕ್ರಮ ಲಾಭ ಪಡೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.




