ವಿಟ್ಲ: ಅಕ್ರಮ ಗೋ ಸಾಗಾಟ ಹೆಸರಿನಲ್ಲಿ ಮಸೀದಿಗಳಿಗೆ ಪೊಲೀಸರು ಭೇಟಿ ನೀಡಿದ ವಿಚಾರ: ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ನಿಯೋಗ ವಿಟ್ಲ ಪೊಲೀಸ್ ಠಾಣೆಗೆ ಭೇಟಿ, ಮಾತುಕತೆ
ವಿಟ್ಲ: ಅಕ್ರಮ ಗೋ ಸಾಗಾಟ ಹೆಸರಲ್ಲಿ ಪೋಲಿಸರು ಕೆಲವು ಮಸೀದಿಗಳಿಗೆ ತೆರಳಿದ ವಿಚಾರವಾಗಿ ಸತ್ಯಾಂಶವನ್ನು ತಿಳಿಸುವ ಉದ್ದೇಶದಿಂದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ, ಅಲ್ಪಸಂಖ್ಯಾತ ಮುಖಂಡರೂ ಆದ ಎಂ.ಎಸ್.ಮಹಮ್ಮದ್ ನೇತೃತ್ವದಲ್ಲಿ ಠಾಣೆಗೆ ಭೇಟಿ ನೀಡಿದ ನಿಯೋಗ ಪೊಲೀಸ್ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗ ಅವರ ಜತೆ ಮಾತುಕತೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಅಕ್ರಮ ಗೋ ಸಾಗಾಟ, ಗೋ ವಧೆಯನ್ನು ಇಸ್ಲಾಂ ಧರ್ಮ ವಿರೋಧಿಸುತ್ತದೆ. ಇದನ್ನು ಒಪ್ಪುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಯಾರದರೂ ಅಕ್ರಮ ಸಾಗಾಟ ಮಾಡಿದರೆ ಅದನ್ನು ಇಡೀ ಸಮುದಾಯದ ಮೇಲೆ ಎತ್ತಿ ಕಟ್ಟುವುದು ಸರಿಯಲ್ಲ. ಅಧಿಕೃತ ದಾಖಲೆಗಳಿಲ್ಲದೇ ಗೋ ಸಾಗಾಟ ಮಾಡುವವನಿಗೆ ಮತ್ತು ಆತನಿಗೆ ಮಾರಾಟ ಮಾಡುವವನಿಗೆ ತಕ್ಕ ಶಿಕ್ಷೆ ಆಗಬೇಕು. ಈ ಬಗ್ಗೆ ಮಸೀದಿಗೆ ಬಂದು ಜಾಗೃತಿ ಮೂಡಿಸುವ ಅಗತ್ಯವಿಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಇಂತಹ ಘಟನೆ ನಡೆಯದ ಹಾಗೇ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ವಿಟ್ಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಕರೀಂ ಕುದ್ದುಪದವು, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ನಾಮನಿರ್ದೇಶಕ ಸದಸ್ಯ ಶಮೀರ್ ಪಳಿಕೆ, ರಶೀದ್ ವಿಟ್ಲ, ಸಿರಾಜ್ ಮಣಿಲ, ಕನ್ಯಾನ ಗ್ರಾ.ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಕನ್ಯಾನ, ಪುತ್ತೂರು ಗ್ಯಾರಂಟಿ ಯೋಜನೆಯ ಸದಸ್ಯ ಅಬ್ಬು ಹುಸೈನ್ ನವಗ್ರಾಮ, ಸಾಮಾಜಿಕ ಮುಖಂಡ ಹಸೈನಾರ್ ತಾಳಿತ್ತನೂಜಿ, ಅಶ್ರಪ್ ಮಣಿಲ, ರಹೀಂ ಪಳಿಕೆ, ಗ್ರಾ.ಪಂಚಾಯತ್ ಮಾಜಿ ಸದಸ್ಯರಾದ ಶೇಕ್ ಅಲಿ ಸೇರಾಜೆ ಮೊದಲಾದವರು ಉಪಸ್ಥಿತರಿದ್ದರು.




