ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಡೆಲಿವರಿ ಬಾಯ್ ಬಂಧನ
ಬೆಂಗಳೂರು: ಬ್ರೆಜಿಲ್ ಮೂಲದ ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪ ಮೇಲೆ ಡೆಲಿವರಿ ಬಾಯ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಕುಮಾರ್ ರಾವ್ ಎಂದು ಗುರುತಿಸಲಾಗಿದ್ದು, ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂತ್ರಸ್ತೆ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ಗಮನಿಸಿದ ನಂತರ ಡೆಲಿವರಿ ಬಾಯ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ, ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
ಅ.17ರಂದು ಬ್ರೆಜಿಲ್ ಮೂಲದ ಮಾಡೆಲ್ ಆ್ಯಪ್ ಒಂದರಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ದಿನಸಿ ತಂದ ಡೆಲಿವರಿ ಬಾಯ್ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಮಾಡೆಲ್ ಜೊತೆ ಅನುಚಿತ ವರ್ತನೆ ತೋರಿದ್ದಾನೆ. ಆಕೆಯನ್ನು ಮಾತಿಗೆಳೆದು ಆಕೆಯ ಮೈ ಮುಟ್ಟಲು ಯತ್ನಿಸಿದ್ದಾನೆ.
ಇದರಿಂದ ಆತಂಕಕ್ಕೀಡಾದ ಮಾಡೆಲ್ ಕಿರುಚಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಕೂಡಲೇ ಡೆಲಿವರಿ ಬಾಯ್ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಮಾಡೆಲ್ ತಾನು ಕೆಲಸ ಮಾಡುವ ಕಂಪನಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




