ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವ್ಯಕ್ತಿಯ ಬಂಧನ
ಹುಬ್ಬಳ್ಳಿ: ಮನೆ ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ನಗರದ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ಗರುತಿಸಲಾಗಿದೆ. ಕದ್ದ ಒಳ ಒಡುಪುಗಳನ್ನ ಈತ ವಾರದ ಬಳಿಕ ಅದೇ ಮನೆಯ ಬಳಿ ಎಸೆದು ಹೋಗುತ್ತಿದ್ದ ಎಂಬ ವಿಷಯವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮನೆ ಮುಂದೆ ಒಣಗಿಸುತ್ತಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆಯಾಗುತ್ತಿರುವ ಘಟನೆ ವೀರಾಪುರ ಓಣಿಯಲ್ಲಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿತ್ತು. ತಾವೇ ಸರಿಯಾಗಿ ಬಟ್ಟೆ ಒಣಗಿಸದ ಕಾರಣ ಗಾಳಿಗೆ ಅವು ಹಾರಿ ಹೋಗಿರಬಹುದು ಎಂದು ಆರಂಭದಲ್ಲಿ ಮಹಿಳೆಯರು ಭಾವಿಸಿದ್ದರು. ಆದರೆ ಇದು ಕೇವಲ ಒಂದು ಮನೆಯ ಸಮಸ್ಯೆ ಅಲ್ಲ. ಬದಲಾಗಿ ಏರಿಯಾದಲ್ಲಿಯೇ ಈ ರೀತಿ ಘಟನೆಗಳು ನಡೆಯುತ್ತಿವೆ ಎಂಬ ವಿಷಯ ಗೊತ್ತಾದಾಗ, ಸಿಸಿ ಕ್ಯಾಮರಾಗಳ ಪರಿಶೀಲನೆಗೆ ನಿವಾಸಿಗಳು ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಒಳ ಉಡುಪುಗಳು ನಾಪತ್ತೆಯಾಗ್ತಿರೋದಕ್ಕೆ ಅಸಲಿ ಕಾರಣ ಬಹಿರಂಗಗೊಂಡಿದೆ. ಯುವಕನೋರ್ವ ಅವುಗಳನ್ನು ಕದ್ದು ಹೋಗುವ ದೃಶ್ಯಗಳನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.




