ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ನಿಂದ ಚಿನ್ನಾಭರಣ ಕಳವು: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ನಿಂದ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿದಂತೆ ವಿಮಾನ ನಿಲ್ದಾಣದ ನಾಲ್ಕು ಮಂದಿ ಸಿಬ್ಬಂದಿಯನ್ನು ಬಜ್ಪೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ ಮತ್ತು ರಾಜೇಶ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಅಗಸ್ಟ್ 30 ರಂದು ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದ ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ನ್ನು ಪಡೆದು ಚೆಕ್ ಮಾಡಿದಾಗ ಸುಮಾರು 4.5 ಲಕ್ಷ ಮೌಲ್ಯದ 56 ಗ್ರಾಂ ತೂಕದ ಚಿನ್ನಾಭರಣ ಕಳವು ಆಗಿದ್ದು ಪತ್ತೆಯಾಗಿದೆ. ಈ ಬಗ್ಗೆ ಪ್ರಯಾಣಿಕರು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ AIR INDIA SATS ಕಂಪೆನಿಯಲ್ಲಿ ಲೋಡರ್ ಅನಲೋಡರ್ ಕೆಲಸ ಮಾಡಿಕೊಂಡಿರುವ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾರೆ. ಈ ವೇಳೆ ಆರೋಪಿಗಳು ಕಳ್ಳತನದ ಬಗ್ಗೆ ಬಾಯಿಬಿಟ್ಟಿದ್ದಾರೆ. ಆರೋಪಿಗಳು ಕದ್ದ ಚಿನ್ನವನ್ನು ಮೂಡುಪೆರಾರದ ನಿವಾಸಿ ರವಿರಾಜ್ ಎಂಬಾತನಿಗೆ ಚಿನ್ನಾಭರಣವನ್ನು ಮಾರಿದ್ದು, ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 50 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿಚಾರಣೆ ನಡೆಸಿದ ವೇಳೆ 2025 ನೇ ಸಾಲಿನ ಜನವರಿ ತಿಂಗಳಿನಲ್ಲಿ ಇದೇ ರೀತಿ ಪ್ರಯಾಣಿಕ ಮನೋಹರ್ ಶೆಟ್ಟಿ ರವರ ಬ್ಯಾಗಿನಿಂದ ಕಳವು ಮಾಡಿದ್ದ 2 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಎಲ್ಲಾ ಆರೋಪಿಗಳು ಸುಮಾರು 9 ವರ್ಷಗಳಿಂದ AIR INDIA SATS ರಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ. ಸದ್ರಿ ಎಲ್ಲಾ 5 ಆರೋಪಿಗಳನ್ನು ನ್ಯಾಯಾಲಯಕ್ಕೆ ಪಡಿಸಿ ಪೊಲೀಸರ ವಶಕ್ಕೆ ಪಡೆಯಲಾಗಿದೆ.




