ಬಂಟ್ವಾಳ ತಾಲೂಕಿನಾದ್ಯಂತ ಬೀದಿ ನಾಯಿಗಳ ಹಾವಳಿ ತಡೆಗಟ್ಟಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ತಹಶಿಲ್ದಾರರಿಗೆ ಮನವಿ ಸಲ್ಲಿಸಿದ ಎಸ್‌ಡಿಪಿಐ ನಿಯೋಗ
ಬಂಟ್ವಾಳ: ತಾಲ್ಲೂಕಿನೆಲ್ಲೆಡೆ ಬೀದಿ ನಾಯಿಗಳಿಂದ ಸಾರ್ವಜನಿಕರು ಧಾಳಿಗೊಳಗಾಗುತ್ತಿದ್ದು, ಈ ಕುರಿತಂತೆ ತಾಲೂಕಿನ ವಿವಿಧ ಪ್ರದೇಶಗಳಿಂದ ನಿರಂತರವಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕ್ರಮ ಅಗತ್ಯವಾಗಿದೆ. ಶಾಲೆಗೆ ಹಾಗೂ ಮದರಸಕ್ಕೆ ಹೋಗುವ ಮಕ್ಕಳು ಹಾಗೂ ಹಿರಿಯ ನಾಗರಿಕರು ಭಯದಿಂದ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವಂತೆಯೂ, ಸಾರ್ವಜನಿಕರಿಗೆ ಗರಿಷ್ಟ ಭದ್ರತೆ ಒದಗಿಸುವಂತೆಯೂ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಶಾಹುಲ್ ಹಮೀದ್ ಎಸ್ ಎಚ್ ನೇತೃತ್ವದ ನಿಯೋಗದಿಂದ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.ನಿಯೋಗದಲ್ಲಿ ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ, ಉಪಾಧ್ಯಕ್ಷ ಇಕ್ಬಾಲ್ ಇಝಾನ್, ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು ಹಾಗೂ ಬಿ ಸಿ ರೋಡ್ ಸಿಟಿ ಕೌನ್ಸಿಲ್ ಅಧ್ಯಕ್ಷರಾದ ಬಶೀರ್ ಪಲ್ಲ ಉಪಸ್ಥಿತರಿದ್ದರು.


