ಕುಡಿದ ಮತ್ತಿನಲ್ಲಿ ಚಾಕುವಿನಿಂದ ಇರಿದು ತಂದೆಯ ಕೊಲೆ: ಆರೋಪಿ ಪುತ್ರನ ಬಂಧನ
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಮಗನೇ ತಂದೆಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ (51) ಮಗನಿಂದಲೇ ಕೊಲೆಯಾದ ದುರ್ದೈವಿ, ರಂಜನ್ (21) ಕೊಲೆಗೈದ ಆರೋಪಿಯಾಗಿದ್ದಾನೆ. ಪೋಷಕರ ನಡುವೆ ನಡೆದ ಗಲಾಟೆಯ ವೇಳೆ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಬಳಿಕ ಸದ್ದಿಲ್ಲದೇ ತಂದೆಯ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಎಂದು ತಿಳಿದು ಬಂದಿದೆ.
ಆರೋಪಿ ರಂಜನ್ ಆ.16ರ ಸಂಜೆ ಆಲ್ದೂರಿಗೆ ಹೋಗಿ ಸಂತೆ ಮುಗಿಸಿಕೊಂಡು, ಮಧ್ಯಪಾನ ಮಾಡಿ ಮನೆಗೆ ಬಂದಿದ್ದ. ಈ ವೇಳೆ ತಂದೆ-ತಾಯಿ ನಡುವೆ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಜಗಳ ಬಿಡಿಸಲು ಹೋದ ರಂಜನ್, ತಂದೆಗೆ ಹಿಂದಿನಿಂದ ಚಾಕು ಇರಿದ್ದಿದ್ದಾನೆ. ಕೊನೆಗೆ ಜಗಳ ಬಿಡಿಸಿದ ತಾಯಿ ಚಾಕುವಿನಿಂದ ಆದ ಗಾಯಕ್ಕೆ ಅರಿಶಿನ ಪುಡಿ ಹಚ್ಚಿ ಮಲಗಿಸಿದ್ದಾರೆ. ರಾತ್ರಿ ರಕ್ತಸ್ರಾವ ಹೆಚ್ಚಾಗಿ ಮಂಜುನಾಥ್ ಪ್ರಾಣ ಪಕ್ಷಿ ಹಾರಿಹೋಗಿದೆ.




