ಮಂಗಳೂರು: ಆ. 24ರಂದು ಸೌಜನ್ಯ ಹೋರಾಟ ಸಮಿತಿಯಿಂದ ‘ಉಜಿರೆ ಚಲೋ’
ಮಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಆಗಸ್ಟ್ 24 ರಂದು ಸೌಜನ್ಯ ಹೋರಾಟ ಸಮಿತಿಯಿಂದ ‘ಉಜಿರೆ ಚಲೋ’ ಹಮ್ಮಿಕೊಳ್ಳಲಾಗಿದೆ.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಯಂತಹ ಹಲವಾರು ಪ್ರಕರಣಗಳು ನಡೆಯುತ್ತಿದೆ. 1983 ರಲ್ಲಿ ಧರ್ಮಸ್ಥಳದಲ್ಲಿ ನಡೆದಂತಹ ಸಾವುಗಳ ಬಗ್ಗೆ ಅಂದಿನ ವಿಧಾನ ಸಭೆಯಲ್ಲಿ ಕೂಡಾ ಚರ್ಚೆಗಳು ನಡೆದಿದ್ದವು. ಅದಾದ ನಂತರ 1986 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುವ ಶಾಲೆಯ ಶಿಕ್ಷಕಿಯಾದ ವೇದವಲ್ಲಿ ಎನ್ನುವವರನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಆರೋಪಿ ಸಿಕ್ಕಿಲ್ಲ,ನಂತರ 1973 ರಲ್ಲಿ ಎಸ್.ಡಿ.ಎಮ್ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಇದರಲ್ಲೂ ಆರೋಪಿ ಸಿಕ್ಕಿಲ್ಲ. ನಂತರ 2012 ರಲ್ಲಿ ಶ್ರೀ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಆನೆ ಮಾವುತ ನಾರಾಯಣ ಮತ್ತು ಯಮುನಾರವರ ಕೊಲೆ, ದರೋಡೆ ನಡೆದಿತ್ತು, ಇಲ್ಲೂ ಕೂಡ ಆರೋಪಿ ಸಿಕ್ಕಿಲ್ಲ. ಇದಾಗಿ 20 ದಿನದಲ್ಲೇ ಅಂದರೆ 9/10/2012 ರಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಇಲ್ಲೂ ಕೂಡಾ ಆರೋಪಿ ಸಿಕ್ಕಿಲ್ಲ, ಅಲ್ಲದೇ ಈ ಮಧ್ಯೆ ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002 ರಿಂದ 2012 ರವರೆಗೆ 452 ಆಸಹಜ ಸಾವು ಪ್ರಕರಣ ನಡೆದಿತ್ತು.
ಇದರಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನವರು ಹೇಳಿರುವ ಶವಗಳಿಗೂ ಪೋಲಿಸ್ ಇಲಾಖೆ ನೀಡಿರುವ ಯು.ಡಿ.ಆರ್.ಗೂ ವ್ಯತ್ಯಾಸ ಕಂಡು ಬರುತ್ತದೆ. ಅಲ್ಲದೇ 1970 ರಿಂದ 2025 ರ ವರೆಗೆ ಹಲವಾರು ಕೊಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನಡೆದಿದೆ. ಇಷ್ಟೆಲ್ಲಾ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆಯುತ್ತಿದ್ದರೂ ಕೂಡಾ ಯಾವ ಪ್ರಕರಣದಲ್ಲೂ ಆರೋಪಿ ಸಿಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕೆ.ದಿನೇಶ್ ಗಾಣಿಗರವರು ತಿಳಿಸಿದ್ದಾರೆ.




