ಬಂಟ್ವಾಳ: ತಾಲೂಕು ಕಚೇರಿಗೆ ಲೋಕಾಯುಕ್ತ ದಾಳಿ: ಉಪತಹಶೀಲ್ದಾರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು-ತಹಶೀಲ್ದಾರ್ ತೀವ್ರ ವಿಚಾರಣೆ
ಬಂಟ್ವಾಳ: ಬಂಟ್ವಾಳ ತಾಲೂಕು ಕಚೇರಿಗೆ ಬುಧವಾರ ಮಧ್ಯಾಹ್ನ ಲೋಕಾಯುಕ್ತ ದಾಳಿ ನಡೆದಿದ್ದು, ಉಪತಹಶೀಲ್ದಾರ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ತಹಶೀಲ್ದಾರ್ ಪಾತ್ರ ಇದೆಯೇ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಥಮ ದರ್ಜೆ ಸಹಾಯಕ ಸಂತೋಷ್ ಹಾಗೂ ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಸಜೀಪಮುನ್ನೂರಿನ ಪುಷ್ಪರಾಜ್ ಅವರ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಿ.ಸಿ.ರೋಡಿನ ದೇವಸ್ಥಾನವೊಂದರ ಬಳಿ ಮಧ್ಯವರ್ತಿಯ ಮೂಲಕ ಹಣ ವ್ಯವಹಾರ ನಡೆಯುವ ಸಂದರ್ಭದಲ್ಲಿ ಪ್ರಕರಣವನ್ನು ಬೇಧಿಸಲಾಗಿದೆ.
ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಡಿವೈಎಸ್ಪಿಗಳಾದ ಗಾನಾ ಪಿ.ಕುಮಾರ್, ಸುರೇಶ್ ಕುಮಾರ್, ಇನ್ಸ್‌ಪೆಕ್ಟರ್ ಚಂದ್ರಶೇಖರ, ಭಾರತಿ ಹಾಗೂ ಸಿಬ್ಬಂದಿ ದಾಳಿ ನಡೆಸಿದೆ.




