ಧರ್ಮಸ್ಥಳ ಪ್ರಕರಣದ ದಿಕ್ಕು ತಪ್ಪಿಸಲು SDPI ನಾಯಕರ ಮನೆಗಳ ಮೇಲೆ NIA ದಾಳಿ: ಜಲೀಲ್ ಕೃಷ್ಣಾಪುರ
ಮಂಗಳೂರು : ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಯ ದಿಕ್ಕು ತಪ್ಪಿಸಲು ಎಸ್‌ಡಿಪಿಐ ನಾಯಕರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಲಾಗಿದೆ ಎಂದು SDPI ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಆರೋಪಿಸಿದರು.
ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಎನ್‌ಐಎ ಮೂಲಕ ಹಿಂಸಿಸಲು ಹೊರಟರೆ ಕಾನೂನಿನ ಜೊತೆ ಬೀದಿ ಹೋರಾಟ ನಡೆಸುತ್ತೇವೆ, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿದರೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುತ್ತೇವೆ ಎಂದು ಅವರು ಎಚ್ಚರಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರ ಇಲ್ಲದಿದ್ದರೂ ಕೇವಲ ಮೊಬೈಲ್ ಟವರ್ ಲೊಕೇಷನ್ ಆಧಾರದಲ್ಲಿ ಎಸ್‌ಡಿಪಿಐ ರಾಜ್ಯ ನಾಯಕರಾಗಿದ್ದ ಶಾಫಿ ಬೆಳ್ಳಾರೆ ಮತ್ತು ಜಿಲ್ಲಾ ನಾಯಕರಾಗಿದ್ದ ಇಕ್ಬಾಲ್ ಬೆಳ್ಳಾರೆಯವರನ್ನು ಮೂರು ವರ್ಷಗಳಿಂದ ಅಕ್ರಮ ಬಂಧನದಲ್ಲಿಡಲಾಗಿದೆ ಎಂದು ಅವರು ದೂರಿದರು. ಅದೇ ರೀತಿ ಈ ಪ್ರಕರಣದಲ್ಲಿ ಎನ್‌ಐಎ ಮುಂದುವರಿದರೆ ಕಾನೂನಿನ ಮೂಲಕ ಉತ್ತರಿಸುತ್ತೇವೆ, ನಮ್ಮನ್ನು ಸದೆಬಡಿಯಲು ಎಷ್ಟೇ ಪ್ರಯತ್ನಿಸಿದರೂ ನಮ್ಮ ಹೋರಾಟದಿಂದ ಹಿಂದೆ ಸರಿಯುದಿಲ್ಲ, ಪ್ರಜಾಪ್ರಭುತ್ವ ಮಾರ್ಗದಲ್ಲಿ ಹೋರಾಟ ನಡೆಸುತ್ತೇವೆ ಎಂದು ನುಡಿದರು.
ರೌಡಿಶೀಟರ್ ಹತ್ಯೆಯ ತನಿಖೆಯನ್ನು ಇಷ್ಟೊಂದು ಆಳಕ್ಕೆ ಹೋಗಿ ಗಂಭೀರ ತನಿಖೆ ನಡೆಯುತ್ತಿದ್ದು, ಈ ಪ್ರಕರಣಕ್ಕೆ ಸಿಕ್ಕಷ್ಟು ಗಂಭೀರತೆ ಆಶ್ರಫ್ ವಯನಾಡು ಮತ್ತು ರೆಹ್ಮಾನ್ ಕೊಲೆ ಪ್ರಕರಣಕ್ಕೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಲೆ ಪ್ರಕರಣಗಳ ತನಿಖೆಯಲ್ಲಿ ಇಬ್ಬಗೆಯ ನೀತಿ ಸರಿಯಲ್ಲ ಎಂದರು.
ಸುದ್ದಿಗೋಷ್ಟೀಯಲ್ಲಿ ಪಕ್ಷದ ಮಂಗಳೂರು ನಗರ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಹಳೆಯಂಗಡಿ ಉಪಸ್ಥಿತರಿದ್ದರು.




