ಕುಂದಾಪುರ: ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಕೂಟರ್ ಸಹಸವಾರೆ ಸಾವು
ಕುಂದಾಪುರ: ಖಾಸಗಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಸಹ ಸವಾರೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಬೈಂದೂರು – ಕುಂದಾಪುರ ರಾ.ಹೆ. 66ರ ಸಂಗಮ್ ಜಂಕ್ಷನ್ ಸಮೀಪದ ನವಭಾರತ್ ಟಿಂಬರ್ ಎದುರಿನ ರಸ್ತೆಯಲ್ಲಿ ಸಂಭವಿಸಿದೆ.
ಮೃತರನ್ನು ಹೊಸಮಠ ಚಾರುಕೊಟ್ಟಿಗೆ ನಿವಾಸಿ ಜಲಜಾ (64) ಎಂದು ಗುರುತಿಸಲಾಗಿದೆ. ಅವರ ಪತಿ ಸ್ಕೂಟರ್ ಸವಾರ ನಾರಾಯಣ ಅವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಗಳ್ಳಿಯಿಂದ ಚಾರುಕೊಟ್ಟಿಗೆಗೆ ಕಡೆಗೆ ನಾರಾಯಣ ಹಾಗೂ ಜಲಜಾ ಅವರು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದರು. ಸಂಗಮ ಬಳಿ ಸಂಚರಿಸುತ್ತಿದ್ದಾಗ ಬಸ್ ಹಿಂದಿನಿಂದ ವೇಗವಾಗಿ ಬಂದು ಸ್ಕೂಟರ್‌ಗೆ ಢಿಕ್ಕಿಯಾಗಿದೆ.
ಪರಿಣಾಮ ನಾರಾಯಣ ಹಾಗೂ ಜಲಜಾ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಜಲಜಾ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ಕರೆದೊಯ್ದರು, ಅಷ್ಟರೊಳಗೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಸ್ ಚಾಲಕನ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




