ಮಂಗಳೂರು: ವಿದೇಶದಲ್ಲಿರುವರ ಮನೆಗೆ ನುಗ್ಗಿ 1 ಕೆ.ಜಿ ಚಿನ್ನಾಭರಣ ಕಳ್ಳತನ
ಮಂಗಳೂರು: ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ಲಾಕರ್‌ನಲ್ಲಿದ್ದ ಸುಮಾರು 1 ಕೆ.ಜಿ. ಚಿನ್ನಾಭರಣ ಕಳವು ಮಾಡಲಾದ ಘಟನೆ ಬಜ್ಪೆಯ ಪೆರ್ಮುದೆ ಪೇಟೆಯಲ್ಲಿ ನಡೆದಿದೆ. ಪೆರ್ಮುದೆಯ ಜಾನ್ವಿನ್ ಪಿಂಟೋ ಅವರ ಮನೆಯಿಂದ ಈ ಕಳ್ಳತನ ನಡೆದಿದೆ.
ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ಕುವೈಟ್‌ನಲ್ಲಿದ್ದಾರೆ. ಮನೆಯಲ್ಲಿ ಯಾರೂ ಇರಲಿಲ್ಲ. ಇವರ ಮನೆಯ ಸುತ್ತ 16 ಸಿಸಿ ಕ್ಯಾಮೆರಾ ಇದ್ದರೂ, ಕೆಮರಾ ಇಲ್ಲದ ಕಡೆಯಿಂದ ಬಂದು ಕೆಮರಾದ ದಿಕ್ಕನ್ನು ಬದಲಿಸಿ ಕಿಟಿಕಿಯ ಕಬ್ಬಿಣದ ರಾಡ್ ಅನ್ನು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದರು. ಈ ಮನೆಯಲ್ಲಿ ಮುಧೋಳ, ಜರ್ಮನ್ ಶೆಫರ್ಡ್ ಸೇರಿದಂತೆ 8 ಸಾಕು ನಾಯಿಗಳಿವೆ. ಇವುಗಳ ಕಣ್ತಪ್ಪಿಸಿ ಕೃತ್ಯವೆಸಗಿದ್ದಾರೆ.
ಲಾಕರ್‌ನಲ್ಲಿದ್ದ ಅಪಾರ ಚಿನ್ನಾಭರಣ, ವಾಚ್‌ಗಳನ್ನು ಕಳವು ಮಾಡಿದ್ದಾರೆ. ಲಾಕರ್ ಕೀಯನ್ನು ಬಳಸಿ ಅದನ್ನು ತೆರೆದಿರುವುದು ಕಂಡುಬಂದಿದೆ. ಪ್ರತೀದಿನ ಮನೆಯ ನಾಯಿಗಳಿಗೆ ಆಹಾರ ಹಾಕಲು ಇಬ್ಬರು ಕೆಲಸದಾಳುಗಳು ಬರುತ್ತಿದ್ದರು. ಎಂದಿನಂತೆ ಅವರು ಬೆಳಗ್ಗೆ ನಾಯಿಗಳಿಗೆ ಆಹಾರ ಹಾಕಲು ಬಂದಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಅವರು ಕುವೈಟ್‌ನಲ್ಲಿರುವ ಮಾಲಕರಿಗೆ ಮಾಹಿತಿ ನೀಡಿದ್ದರು. ಎಸಿಪಿ ಕೆ. ಶ್ರೀಕಾಂತ್, ಇನ್‌ಸ್ಪೆಕ್ಟರ್ ಸಂದೀಪ್, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಲಕರು ಬುಧವಾರ ಕುವೈಟ್‌ನಿಂದ ಆಗಮಿಸಿದ ಬಳಿಕ ಕಳವಾದ ಸೊತ್ತುಗಳ ನಿಖರ ವಿವರ ಲಭಿಸಲಿದೆ.




