ಖಾಸಗಿ ಕಂಪನಿಯಿಂದ ಹೊಸ ಮೆಡಿಸಿನ್ ಪ್ರಯೋಗ: ರಕ್ತ ಹೆಪ್ಪುಗಟ್ಟಿ ವ್ಯಕ್ತಿ ಸಾವು
ಆನೇಕಲ್: ಖಾಸಗಿ ಕಂಪನಿ ನಡೆಸುವ ಮೆಡಿಸಿನ್ ಪ್ರಯೋಗಕ್ಕೆ ಸ್ವಪ್ರೇರಿತವಾಗಿ ಒಳಗಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಲಬುರಗಿ ಮೂಲದ ನಾಗೇಶ್ (33) ಎಂದು ಗುರುತಿಸಲಾಗಿದ್ದು, ತಮ್ಮ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಖಾಸಗಿ ಮೆಡಿಸನ್ಸ್ ಕಂಪನಿಯೊಂದಕ್ಕೆ ಆ್ಯಪ್ ಮೂಲಕ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಲು ನೋಂದಣಿ ಮಾಡಿಕೊಂಡಿದ್ದರು. ಕಳೆದ ಡಿಸೆಂಬರ್ 2ನೇ ವಾರದಲ್ಲಿ ಮೆಡಿಸಿನ್ ಪ್ರಯೋಗಕ್ಕೆ ಒಳಗಾಗಿದ್ದರು. ಅದಾದ ಎರಡು ದಿನದ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ಅದಾದ ಕೆಲವು ದಿನಗಳ ಬಳಿಕ ಸಹೋದರನ ಮನೆಯಲ್ಲಿದ್ದಾಗ ರಕ್ತ ಹೆಪ್ಪುಗಟ್ಟಿ ನಾಗೇಶ್ ಮೃತಪಟ್ಟಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.




