ಕೈಕಂಬ-ಪರ್ಲಿಯಾ: ಮನೆಗೆ ನುಗ್ಗಿ ಮನೆ ಮಂದಿಗೆ ತಂಡದಿಂದ ಹಲ್ಲೆ, ಕೊಲೆ ಬೆದರಿಕೆ: FIR ದಾಖಲು
ಬಂಟ್ವಾಳ: ಬಿ.ಸಿ.ರೋಡಿನ ಪರ್ಲಿಯಾ ಬಳಿಯ ಮದ್ದದಲ್ಲಿ ಡಿ. 11ರ ತಡರಾತ್ರಿ 1.30ರ ಸುಮಾರಿಗೆ ಮನೆಗೆ ನುಗ್ಗಿ ಮನೆಮಂದಿಗೆ ತಂಡದಿಂದ ಹಲ್ಲೆ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳಾದ ಹಸೈನಾರ್ ತಾಳಿಪಡ್ಪು, ರಫೀಕ್ ತಪಟ್ಟಿ ಬಂಟ್ವಾಳ , ಜಸೀಲ್ ತಲಪಾಡಿ ಅಫೀಝ್ ತಲಪಾಡಿ , ರಿಯಾಜ್ ಕುಮೇರು ,ಶಮೀರ್ ಚಮ್ಮಿ , ನೌಫಾಲ್ ಮಾರಿಪಲ್ಲ ,ನೌಫಾಲ್ ತಂದೆ:ಬಸೀರ್ ಬಲ್ಬು ,ತುಫೈಲ್ ಬಂದರ್ ,.ಸಮದ್ ತಾಳಿಪಡ್ಪು ಹಾಗೂ ಅಪರಿಚಿತರು 15 ಮಂದಿ ಅಕ್ರಮ ಕೂಟ ಕಟ್ಟಿಕೊಂಡು ಶಸ್ತ್ರಾಸ್ತ್ರ ಗಳೊಂದಿಗೆ ಶಾಹುಲ್ ಹಮೀದ್ ಅವರ ಮನೆಗೆ ನುಗ್ಗಿ ಗರ್ಭಿಣಿ ಮೇಲೆ ಹಲ್ಲೆ ಹಾಗೂ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಲ್ಲದೆ, ಶಾಹುಲ್ ಹಮೀದ್ ಅವರ ಪತ್ನಿ, ಮಕ್ಕಳಾದ ಸಮೀರ್, ಶಫೀಕ್, ಸಫ್ವಾನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆಯಲ್ಲಿದ್ದ ಶಾಹುಲ್ ಹಮೀದ್ ಅವರ ಮಗಳಾದ ಗರ್ಭಿಣಿ ಶಬೀರಳನ್ನು ದೂಡಿ ಹಾಕಿ,ಹೊಟ್ಟೆಗೆ ಹಲ್ಲೆ ಮಾಡಿದ್ದಲ್ಲದೆ ಮತ್ತೊಬ್ಬಳು ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಲ್ಲದೆ ಕುತ್ತಿಗೆಯಲ್ಲಿದ್ದ ಎರಡು ಪವನ್ ಚಿನ್ನದ ಸರವನ್ನು ಎಳೆದುಕೊಂಡು ಹೋಗಿದ್ದಾರೆ. ಜೊತೆಗೆ ಶಾಹುಲ್ ಅವರ ಪತ್ನಿಗೂ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮದ್ದ ಮನೆ ನಿವಾಸಿ ಸಾಹುಲ್ ಹಮೀದ್ ದೂರು ನೀಡಿದ್ದು, ತಮ್ಮ ಮನೆಯವರೆಲ್ಲ ಮಲಗಿರುವ ಸಮಯ ಆರೋಪಿಗಳು ಎರಡು ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅಕ್ರಮ ಪ್ರವೇಶಗೈದಿದ್ದಾರೆ.
ಸುಮಾರು 15 ಮಂದಿ ಆರೋಪಿಗಳು ತಮ್ಮ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತೀಯಾ ಎಂದು ತಗಾದೆ ತೆಗೆದು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಲ್ಲದೇ ಪುತ್ರಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.




