ಪಡುಬಿದ್ರಿ: ಹುಡುಗಿಗೆ ಮೆಸೇಜ್ ಮಾಡಿದ ಗುಮಾನಿ: ಮಾಜಿ ಗೆಳೆಯನ ಮೇಲೆ ಸ್ನೇಹಿತರಿಂದಲೇ ಹಲ್ಲೆ
ಪಡುಬಿದ್ರಿ: ಸುರತ್ಕಲ್‌ನ ಹುಡುಗಿಗೆ ಮೆಸೇಜ್ ಮಾಡಿದ ಗುಮಾನಿಯೊಂದಿಗೆ ಹಳೆಯ ಸ್ನೇಹಿತರಾಗಿದ್ದು, ಒಂದೂವರೆ ವರ್ಷಗಳಿಂದ ಮಾತುಕತೆ ಇರದ ಗೆಳೆಯರೇ ಉಚ್ಚಿಲದ ಮಹಮ್ಮದ್ ವಾಸಿಮ್ (23) ಅವರಿಗೆ ಅ. 23ರಂದು ಉಚ್ಚಿಲ ಪೇಟೆಯಲ್ಲಿ ಅವರ ಕೆನ್ನೆಗೆ, ಎದೆಗೆ ಕೈಯಿಂದ ಹೊಡೆದು ಗಾಯಗೊಳಿಸಿದ ಪ್ರಕರಣ ಅ. 24ರಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮೊದಲಿಗೆ ಆರೋಪಿ ಪವನ್ ಮಸೇಜ್ ಮಾಡಿದ ಕುರಿತಾಗಿ ಮಹಮ್ಮದ್ ವಾಸೀಮ್ ಹಾಗೂ ಅವರ ತಮ್ಮ ತಾಹೀಬ್‌ಗ ಮೊಬೈಲ್ ಮೂಲಕ ಅವಾಚ್ಯವಾಗಿ ಬೈದಿದ್ದ. ಬಳಿಕ ಇನ್ನೋರ್ವ ಆರೋಪಿ ಇಸ್ಮಾಯಿಲ್, ವಾಸೀಮ್ ಅವರನ್ನು ಉಚ್ಚಿಲ ಬಸ್ ನಿಲ್ದಾಣದ ಬಳಿ ಬಾ. ಸರಿ ಮಾಡೋಣ ಎಂದು ಹೇಳಿದ್ದ. ಬಳಿಕ ಆರೋಪಿಗಳಾದ ಗಗನ್, ಇಸ್ಮಾಯಿಲ್, ಪವನ್, ರಜಾನ್, ಸಫ್ರಾಜ್, ಮಹೇಶ್ ಹಾಗೂ ಅರ್ವಾಜ್ ಅವರು ಮೂರು ಕಾರುಗಳಲ್ಲಿ ಅ. 23ರ ರಾತ್ರಿ ಉಚ್ಚಿಲಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಮ್ಮದ್ ವಾಸೀಮ್ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪಡುಬಿದ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.




