ಕುಂದಾಪುರ: ಭಿಕ್ಷೆ ಬೇಡಿ ಸಂಗ್ರಹಿಸಿದ 1.16 ಲಕ್ಷ ರೂ. ದೇವಸ್ಥಾನಕ್ಕೆ ನೀಡಿದ ವೃದ್ಧೆ
ಕುಂದಾಪುರ: ದೇವಸ್ಥಾನಗಳ ಅಭಿವೃದ್ಧಿಗೆ, ನಿಧಿಗೆ ಶ್ರೀಮಂತರು ದೇಣಿಗೆ ನೀಡುವುದು ಸಾಮಾನ್ಯ. ಆದರೆ ಭಿಕ್ಷೆ ಬೇಡಿ ಬಂದ ಹಣದಲ್ಲಿ ಉಳಿತಾಯ ಮಾಡಿ ದೇವಸ್ಥಾನಕ್ಕೆ ದೇಣಿಗೆ ನೀಡುವುದು ಅಪರೂಪದ ಸಂಗತಿ. ಹೀಗೆ ಭಿಕ್ಷಾಟನೆ ಮೂಲಕ ಬಂದ ಹಣವನ್ನು ದಾನ ಮಾಡಿ ಔದಾರ್ಯ ಮೆರೆದವರು ಗಂಗೊಳ್ಳಿ ಕಂಚುಗೋಡು ನಿವಾಸಿ ಅಶ್ವತ್ಥಮ್ಮ.
ಅಶ್ವತ್ಥಮ್ಮ ಅವರು ಕುಂದಾಪುರದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭಿಕ್ಷೆ ಬೇಡಿ ಸಂಗ್ರಹಿಸಿದ 1.16 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ. ಶಬರಿಮಲೆಯ ಪರಮ ಭಕ್ತೆ ಆಗಿರುವ ಅಶ್ವತ್ಥಮ್ಮ ಅವರು, ಹೀಗೆ ಭಿಕ್ಷೆ ಬೇಡಿ ಬಂದ ಹಣವನ್ನು ಉಳಿಸಿ ದಾನ ಮಾಡುತ್ತಿರುವ ೭ನೇ ದೇವಸ್ಥಾನವಿದು. ಮೊದಲಿಗೆ ಅಶ್ವತ್ಥಮ್ಮ ಅವರು ತಮ್ಮ ಊರಿನ ಕಂಚುಗೋಡಿನ ದೇಗುಲಕ್ಕೆ 15 ಲಕ್ಷ ರೂ. ದೇಣಿಗೆ ನೀಡುವ ಮೂಲಕ ತಮ್ಮ ಈ ಕಾರ್ಯವನ್ನು ಪ್ರಾರಂಭಿಸಿದರು. ಬಳಿಕ ಆನೆಗುಡ್ಡೆ ಕುಂಭಾಶಿ ದೇವಸ್ಥಾನ, ಮಂಗಳಾದೇವಿ, ಬಪ್ಪನಾಡು, ಪೊಳಲಿ ದೇವಸ್ಥಾನಗಳಿಗೆ ತಲಾ 1.5 ಲಕ್ಷ ರೂ., ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ 1 ಲಕ್ಷ ರೂ.ಗಳನ್ನು ಭೋಜನ ನಿಧಿಗೆ ನೀಡಿದ್ದಾರೆ.





