ಬಜಪೆ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಯುವಕ ಮೃತ್ಯು
ಬಜಪೆ: ಮೂಡುಪೆರಾರ ಕಾಯರಾಣೆ ನಿವಾಸಿ ದಿ| ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಅವರು ಸೆ. 1ರಂದು ಹೃದಯಾಘಾತದಿಂದ ನಿಧನ ಹೊಂದಿದರು.
ಮೂಡುಪೆರಾರ ಕಾಯರಾಣೆಯಲ್ಲಿ ರವಿವಾರ ಸಂಜೆ ಕ್ರಿಕೆಟ್ ಆಡುವಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕೈಕಂಬ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿತ್ತು. ಅಲ್ಲಿ ಔಷಧ ತೆಗೆದುಕೊಂಡು ಬಳಿಕ ಬಜಪೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆ್ಯಂಬ್ಯುಲೆನ್ಸ್ ನಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಅವರು ಮೃತಪಟ್ಟರು.
ಅವರು ತಾಯಿ, ಸಹೋದರ, ಸಹೋದರಿಯನ್ನು ಆಗಲಿದ್ದಾರೆ. ಪಡುಪೆರಾರ ಗ್ರಾಮ ಪಂಚಾಯತ್ ಸಿಬಂದಿಯಾಗಿದ್ದ ಅವರು ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯಾಭಿವೃದ್ಧಿ ಸಂಘ ಇದರ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾಗಿದ್ದರು. 2012ರಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಸಿಬಂದಿಯಾಗಿ ಕೆಲಸಕ್ಕೆ ಸೇರಿದ್ದರು. ಕಾಯರಾಣೆ ನವರಂಗ ಫ್ರೆಂಡ್ಸ್‌ನ ಕಾರ್ಯದರ್ಶಿಯಾಗಿದ್ದರು.





