ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ: ದೂರು ದಾಖಲು
ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯೊಬ್ಬರು ತಮ್ಮ ಮಗು ಬದಲಾಗಿದೆ ಎಂದು ಆರೋಪಿಸಿದ್ದು, ದೂರು ದಾಖಲಾಗಿದೆ.
ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯೊಬ್ಬರ ಮಗು ಅದಲು ಬದಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ಆ. 18ರಂದು ಹೆರಿಗೆಯಾಗಿದ್ದರೂ ಎರಡು ದಿನಗಳ ಕಾಲ ಸೂಕ್ತ ಮಾಹಿತಿ ನೀಡದೆ ವೈದ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮಗುವಿಗೆ ಅನ್ಯಾಯವಾಗಿರುವ ಬಗ್ಗೆ ಸಂಶಯವಿದ್ದು, ಈ ಬಗ್ಗೆ ಉನ್ನತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮಗುವಿನ ಪೋಷಕರು ದೂರು ನೀಡಿದ್ದಾರೆ.ಪಾಣೆಮಂಗಳೂರಿನ ನಿವಾಸಿ ಹಾಗೂ ಸಂತ್ರಸ್ತೆ ಭವ್ಯಾ ಪೊಲೀಸರಿಗೆ ದೂರು ನೀಡಿರುವುದಲ್ಲದೆ, ಅವರ ಪರವಾಗಿ ಸಹೋದರ ಸಂತೋಷ್ ಕುಮಾರ್ ಅವರು ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಭವ್ಯಾ, ತಮ್ಮ ಎರಡನೇ ಹೆರಿಗೆಗಾಗಿ ಚೆಕ್ ಅಪ್ಗಾಗಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಆ.17ರಂದು ತೆರಳಿದ್ದರು. ಅಲ್ಲಿ ಮಹಿಳಾ ವೈದ್ಯರಿಲ್ಲದ ಕಾರಣ ಲೇಡಿಗೋಶನ್ ಆಸ್ಪತ್ರೆಗೆ ಆ.18 ರಂದು ರಾತ್ರಿ ದಾಖಲಿಸಲಾಗಿತ್ತು. ಬೆಳಗ್ಗೆ 9.50ರ ಸುಮಾರಿಗೆ ಭವ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.




