February 1, 2026

ಬಂಟ್ವಾಳ ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಎಸ್.ಡಿ.ಪಿ.ಐ. ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮುನೀಶ್ ಅಲಿ ಹೆಸರು ಫಿಕ್ಸ್

0
IMG-20240817-WA0020.jpg

ಬಂಟ್ವಾಳ: ಬಂಟ್ವಾಳ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಎಸ್.ಡಿ.ಪಿ.ಐ. ಪಕ್ಷದಿಂದ ಮುನೀಶ್ ಅಲಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಂಟ್ವಾಳ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮೀಸಲಾಗಿದೆ.

ಆಗಸ್ಟ್ 22ರಂದು ಚುನಾವಣೆ ನಡೆಯಲಿದ್ದು ಈ ಸಂಬಂಧ ನಡೆದ ಎಸ್.ಡಿ.ಪಿ.ಐ. ಪಕ್ಷದ ಆಂತರಿಕ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಮುನೀಶ್ ಅಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ.

ಒಟ್ಟು 27 ಸದಸ್ಯರನ್ನು ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 11, ಎಸ್.ಡಿ.ಪಿ. ಪಕ್ಷದ 4 ಸದಸ್ಯರಾಗಿದ್ದರು. ಆದರೆ ಲೋಕಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್ ಸದಸ್ಯ ಗಂಗಾಧರ ಪೂಜಾರಿ ತನ್ನ ಪುರಸಭಾ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರ್ಪಡಗೊಂಡಿದ್ದರು. ಹೀಗಾಗಿ ಬಿಜೆಪಿಯ 11, ಕಾಂಗ್ರೆಸ್ ನ 11, ಎಸ್.ಡಿ.ಪಿ.ಐ. ಪಕ್ಷದ 4 ಸೇರಿ ಪ್ರಸಕ್ತ 26 ಸದಸ್ಯರಿದ್ದಾರೆ.

ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸಂಸದ ಮತ್ತು ಸ್ಥಳೀಯ ಶಾಸಕ ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ. 11 ಸದಸ್ಯರು, ಸಂಸದ ಮತ್ತು ಶಾಸಕರ ಮತ ಸೇರಿ ಬಿಜೆಪಿಗೆ 13 ಮತಗಳು ಇವೆ. ಮೊದಲ ಅವಧಿಯಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಎಸ್.ಡಿ.ಪಿ.ಐ. ಬಿಗ್ ಶಾಕ್ ನೀಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪಿ.ಐ. ಸದಸ್ಯ ಮನೀಶ್ ಅಲಿ ನಾಮಪತ್ರ ಸಲ್ಲಿಸಿದ್ದರೂ ಕೊನೆ ಗಳಿಗೆಯಲ್ಲಿ ಹಿಂಪಡೆದು ಎಸ್.ಡಿ.ಪಿ.ಐ. ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದರು. ಕಾಂಗ್ರೆಸ್ ನ 12, ಎಸ್.ಡಿ.ಪಿ.ಐ.ಯ 4 ಮತಗಳು ಸೇರಿ 16 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಾದ ಮುಹಮ್ಮದ್ ಶರೀಫ್ ಅಧ್ಯಕ್ಷರಾಗಿ ಮತ್ತು ಜೆಸಿಂತಾ ಉಪಾಧ್ಯಕ್ಷೆಯಾಗಿ ಗೆಲುವು ಸಾಧಿಸಿದ್ದರು.

ಬಂಟ್ವಾಳ ಪುರಸಭೆಯ ಮೊದಲ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿದ ಎಸ್.ಡಿ.ಪಿ.ಐ. ರಾಜ್ಯದ ಗಮನ ಸೆಳೆದಿತ್ತು. ಅಂದು ಬಿಜೆಪಿಯನ್ನು ಸೋಲಿಸಲು ಎಸ್.ಡಿ.ಪಿ.ಐ. ನಾಯಕರು ಮಾಡಿದ ಗಟ್ಟಿ ತೀರ್ಮಾನದಂತೆ ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಯಾವ ರೀತಿಯ ಗಟ್ಟಿ ತೀರ್ಮಾನ ಮಾಡುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಆಗಸ್ಟ್ 22ರಂದು ನಡೆಯುವ ಎರಡನೇ ಹಂತದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಸದಸ್ಯ ಮುನೀಶ್ ಅಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತವಾಗಿದೆ. ಒಂದು ವೇಳೆ ಕಾಂಗ್ರೆಸ್ ಕೂಡಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ.ಗೆ ಸೋಲಾಗಲಿದ್ದು ಬಿಜೆಪಿ ಅಭ್ಯರ್ಥಿ ಗೆಲ್ಲುವ ಅವಕಾಶ ಇದೆ.

ಕಾಂಗ್ರೆಸ್ ಪಕ್ಷದಲ್ಲಿ ವಾಸು ಪೂಜಾರಿ ಮತ್ತು ಜನಾರ್ಧನ ಚೆಂಡ್ತಿಮಾರ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿ ಇದ್ದಾರೆ. ಆದರೆ ಎಸ್.ಡಿ.ಪಿ.ಐ. ಪಕ್ಷದ ತೀರ್ಮಾನವನ್ನು ಕಾದು ನೋಡುತ್ತಿರುವ ಕಾಂಗ್ರೆಸ್ ನಾಯಕರು ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿ ಈವರೆಗೆ ಯಾವುದೇ ಸಭೆ ನಡೆಸಿಲ್ಲ ಎಂದು ತಿಳಿದು ಬಂದಿದೆ. ‌ಬಿಜೆಪಿಯಿಂದ ಕಳೆದ ಬಾರಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿ ಸೋತ ಗೋವಿಂದ ಪ್ರಭು ಅವರೇ ಈ ಬಾರಿಯ ಅಭ್ಯರ್ಥಿಯಾಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!