ಖ್ಯಾತ ನಿರೂಪಕಿ ಅಪರ್ಣ ನಿಧನ
ಬೆಂಗಳೂರು: ಕರ್ನಾಟಕದ ಖ್ಯಾತ ನಿರೂಪಕಿ ಅಪರ್ಣ ನಿಧನರಾಗಿದ್ದಾರೆ. ಇಂದು ಸಂಜೆ ತಮ್ಮ ಮನೆಯಲ್ಲಿ ಅಪರ್ಣಾ ನಿಧನರಾಗಿದ್ದಾರೆ.
ಸ್ಪಷ್ಟ ಕನ್ನಡದಲ್ಲಿ ಕಾರ್ಯಕ್ರಮ ನಿರೂಪಣೆಗೆ ಹೆಸರಾಗಿದ್ದ ಅಪರ್ಣ, ಹಿಂದೊಮ್ಮೆ ನಟಿಯೂ ಆಗಿದ್ದರು.
ಖ್ಯಾತ ನಿರೂಪಕಿ ಅಪರ್ಣ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂದು ಸಂಜೆ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ಮನೆಯಲ್ಲಿ ಕೊನೆಯುಸಿರೆಳಿದ್ದಾರೆ.
1984ರ ‘ಮಸಣದ ಹೂ’ ಸಿನಿಮಾದಲ್ಲಿ ಅಪರ್ಣ ನಟಿಸಿದ್ದರು. ಅಲ್ಲದೆ, ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿದ್ದರು. ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಕನ್ನಡಿಗರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಅವರ ಶೈಲಿ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಹಲವು ಕಾರ್ಯಕ್ರಮಗಳನ್ನು ನಿರೂಪಿಸುತ್ತಿದ್ದರು.ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಸರಕಾರಿ ಪ್ರಕಟಣೆಗಳಿಗೆ ಧ್ವನಿ ನೀಡಿದ್ದರು. 2013ರ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಹಾಸ್ಯ ನಟಿಯಾಗಿಯೂ ಸೈ ಎನಿಸಿಕೊಂಡಿದ್ದರು. ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದ ಅಪರ್ಣ ಬಹುಮುಖ ಪ್ರತಿಭಾವಂತರಾಗಿದ್ದರು.
ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಅಂಕಣ ಬರೆಯುವ ಮೂಲಕ ಓದುಗರಿಗೂ ಹತ್ತಿರವಾಗಿದ್ದರು. ಅಪರ್ಣರವರ ತಂದೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದರು. ಮೊದಲ ಮದುವೆಯಿಂದ ವಿಚ್ಚೇದನ ಪಡೆದಿದ್ದ ಅಪರ್ಣ, ಖ್ಯಾತ ಲೇಖಕ ನಾಗರಾಜ ವಸ್ತಾರೆಯನ್ನು ವರಿಸಿದ್ದರು.





