ಕಾಸರಗೋಡು: Google map ನೋಡಿ ಚಲಾಯಿಸುತ್ತಿದ್ದಾಗ ತೊಡಿಗೆ ಬಿದ್ದ ಕಾರು

ಬದಿಯಡ್ಕ: ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ಕಾಞಂಗಾಡಿನ ಅಂಬಲತ್ತರದಿಂದ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರೊಂದು ತೋಡಿಗೆ (ತೊರೆ) ಬಿದ್ದಿದೆ.
ಕುತ್ತಿಕೋಲಿನಿಂದ ಅರಣ್ಯದ ಮೂಲಕ ಪಾಂಡಿಗೆ ತೆರಳುವಾಗ ಪಳ್ಳಂಜಿ ತೋಡಿನ ಹಳೆಯ ಸೇತುವೆಯಲ್ಲಿ ಅವಘಡ ನಡೆದಿದೆ.
ಇಲ್ಲಿನ ಏಳನೇ ಮೈಲಿನ ಅಂಜಿಲ್ಲತ್ ಹೌಸ್‌ನ ತಸ್ರೀಫ್ (36), ಪುಲ್ಲೂರ್ ಮುನಂಬಂ ಹೌಸ್‌ನ ಅಬ್ದುಲ್ ರಶೀದ್ (35) ಅಪಾಯದಲ್ಲಿ ಸಿಲುಕಿಕೊಂಡವರು.
ಎರಡೂ ಬದಿಯಲ್ಲಿ ಯಾವುದೇ ಆಧಾರ ಇಲ್ಲದ ತೋಡಿನ ಸೇತುವೆ ದಾಟುವಾಗ ಕಾರು ಉರುಳಿದೆ. ಈ ವೇಳೆ ತೋಡು ತುಂಬಿ ಹರಿಯುತ್ತಿತ್ತು.
ಕಾರು ಸಂಪೂರ್ಣವಾಗಿ ಮುಳುಗಿದ್ದರೂ ಕಾರಿನಿಂದ ಹೊರಬಂದ ತಸ್ರೀಫ್, ರಶೀದ್ ಅವರು ಮರವನ್ನು ಹಿಡಿದು ಕುಳಿತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದೂರು ಠಾಣೆ ಪೊಲೀಸರು ಮತ್ತು ಕುತ್ತಿಕೋಲಿನ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿದರು.
ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಚಾಲಕ ತಿಳಿಸಿದ್ದಾರೆ.