September 20, 2024

ಉಪ್ಪಿನಂಗಡಿ: ಯುವಕರ ಮೇಲೆ ತಲವಾರ್ ದಾಳಿ ಪ್ರಕರಣ:
ಎರಡು ಪ್ರಕರಣ ದಾಖಲು

0

ಬೆಳ್ತಂಗಡಿ: ಇಳಂತಿಲ ಗ್ರಾಮದ ಅಂಡೆತ್ತಡ್ಕದಲ್ಲಿ ಭಾನುವಾರ ರಾತ್ರಿ ತಂಡವೊಂದು ಐವರ ಮೇಲೆ ತಲವಾರು ಹಾಗೂ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆಯ ಕುರಿತಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಮುಹಮ್ಮದ್ ಫಯಾಝ್ ಎಂಬವರು ತಾನು ಭಾನುವಾರ ಸಂಜೆ 7.30ರ ವೇಳೆಗೆ ಅಂಡೆತ್ತಡ್ಕದಲ್ಲಿರುವ ಮಂಜುಶ್ರೀ ಸ್ಟೋರ್‌ಗೆ ತನ್ನ ಸ್ನೇಹಿತ ಅಫೀಝ್‌ನೊಂದಿಗೆ ದಿನಸಿ ಖರೀದಿ ಮಾಡಲು ತೆರಳಿದ್ದು, ಅಲ್ಲಿಗೆ ಬಂದ ಆರೋಪಿಗಳಾದ ಜಯರಾಮ್, ಸಂದೀಪ್, ನವೀನ್, ಕಾರ್ತಿಕ್, ಸುಮಂತ್ ಶೆಟ್ಟಿ, ಪ್ರೀತಮ್, ಲತೇಶ್ ನೂಜಿ ಎಂಬವರು ಕೈಯಲ್ಲಿ ರಾಡ್‌ಗಳನ್ನು ಹಿಡಿದುಕೊಂಡು ಬಂದು ನಮಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ರಾಡ್‌ನಿಂದ ಹಲ್ಲೆ ನಡೆಸಿದ್ದಲ್ಲದೆ, ನಾವು ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ನಮ್ಮನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಈ ಸಂದರ್ಭ ಆರೋಪಿ ಜಯರಾಮ ಎಂಬಾತ ನನ್ನನ್ನು ದೂಡಿ ಹಾಕಿದ್ದರಿಂದ ನನ್ನ ಎರಡೂ ಕಾಲಿನ ಮೊಣಗಂಟಿಗೆ ಹಾಗೂ ಕೈಗೆ ಗಾಯವುಂಟಾಗಿದೆ. ಅಲ್ಲದೆ, ನನ್ನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಜಖಂಗೊಂಡು ಎಂಟು ಸಾವಿರ ರೂ. ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಇನ್ನೊಂದು ಪ್ರತ್ಯೇಕ ದೂರು ದಾಖಲಿಸಿರುವ ಅಬ್ದುಲ್ ಝಕಾರಿಯಾ ಎಂಬವರು ಭಾನುವಾರ ರಾತ್ರಿ ಸುಮಾರು ೮ಗಂಟೆಗೆ ತಾನು ಹಾಗೂ ಸಿದ್ದೀಕ್ ಅವರೊಂದಿಗೆ ಇಕ್ಬಾಲ್ ಜಿ. ಅವರ ದಿನಸಿ ಅಂಗಡಿಯ ಬಳಿ ಇರುವಾಗ ಆರೋಪಿಗಳಾದ ಜಯರಾಮ, ಸಂದೀಪ್, ಸುಪ್ರೀತ್, ಪ್ರೀತಮ್, ಲತೇಶ್ ಹಾಗೂ 30 ಜನ ದ್ವಿಚಕ್ರ ವಾಹನ ಸವಾರರು ಅಲ್ಲಿಗೆ ಕೈಯಲ್ಲಿ ತಲವಾರು, ರಾಡ್‌ಗಳನ್ನು ಹಿಡಿದುಕೊಂಡು ಬಂದಿದ್ದು, ಇವರಲ್ಲಿ ಆರೋಪಿ ಸಂದೀಪ್ ಕುಪ್ಪೆಟ್ಟಿ ಎಂಬಾತನು ಬೈಕ್ನಲ್ಲಿ ಸಹಸವಾರನಾಗಿದ್ದ ಆರೋಪಿ ಜಯರಾಮ ಎಂಬಾತನನಲ್ಲಿ ಸಿದ್ದೀಕ್‌ನನ್ನು ತೋರಿಸಿ ಇವನಾ? ಎಂದು ಕೇಳಿದ್ದು, ಆಗ ಆತ ಇವನಲ್ಲ ಎಂದು ಹೇಳಿದಾಗ ಸಿದ್ದೀಕ್‌ಗೆ ತಲವಾರಿನಿಂದ ಕೈಗೆ, ಬೆನ್ನಿಗೆ ಆರೋಪಿಗಳು ಕಡಿದಿದ್ದಾರೆ. ಆಗ ಇತರರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆ ಸಂದರ್ಭ ಅವರ ತಂಡದ ಒಬ್ಬಾತ ನನ್ನನ್ನು ಹಿಡಿದುಕೊಂಡಿದ್ದು, ಜಯರಾಮನು ತನ್ನ ತಲೆಯ ಹಿಂಭಾಗಕ್ಕೆ ಕಡಿದಾಗ, ಸಂದೀಪ್ ಎಂಬಾತ ತನಗೆ ರಾಡ್‌ನಿಂದ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಲಾಗಿದೆ. ಈ ಸಂದರ್ಭ ನಾನು ಹಾಗೂ ಸಿದ್ದೀಕ್ ಅವರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ನಮ್ಮನ್ನು ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು, ಆಗ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಯೂಬ್ ಖಾನ್‌ರ ತಲೆಯ ಭಾಗಕ್ಕೂ ಆರೋಪಿ ಜಯರಾಮ ಕಡಿದು, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಆಸುಪಾಸಿನ ಜನರು ಸೇರುವುದನ್ನು ಕಂಡು ಆರೋಪಿಗಳು ಪರಾರಿಯಾದರು ಎಂದು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಅಯೂಬ್ ಖಾನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಬ್ದುಲ್ ಝಕಾರಿಯಾ ಹಾಗೂ ಸಿದ್ದೀಕ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!