February 2, 2026

ಡ್ರಗ್ಸ್ ಸೇವನೆ, ಮಾರಾಟ ಮಾಡುವವರನ್ನು ಕುಟುಂಬದ ಜೊತೆಗೆ ಜಮಾತ್‌ನಿಂದ ಬಹಿಷ್ಕರಿಸಬೇಕು: ರಫೀಕ್ ಅಝ್ಹರಿ

0
InShot_20240209_145020663.jpg

ತಲಪಾಡಿ: ಮಾದಕ ವಸ್ತುಗಳ ಸೇವನೆ, ಮಾರಾಟ ಮಾಡುವವರನ್ನು ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕುವುದರ ಜೊತೆಗೆ ಅವರ ಕುಟುಂಬವನ್ನು ಜಮಾತ್‌ನಿಂದ ಬಹಿಷ್ಕರಿಸಬೇಕು. ಇದಕ್ಕಾಗಿ ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಕಮಿಟಿಯು ತೀರ್ಮಾನಕೈಗೊಳ್ಳಬೇಕು ಎಂದು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ರಫೀಕ್ ಅಝ್ಹರಿ ನಿರ್ದೇಶನ ನೀಡಿದ್ದಾರೆ.

ಅವರು ಶುಕ್ರವಾರ ಜುಮಾ ನಮಾಝ್‌ನ ಬಳಿಕ ಮಾದಕ ವಸ್ತುಗಳ ಕುರಿತು ಮಾತನಾಡಿ, ತಲಪಾಡಿ ಪರಿಸರ ಸೇರಿದಂತೆ ವಿವಿಧೆಡೆ ಗಾಂಜಾ, ಅಫೀಮು ಸೇರಿದಂತೆ ಮಾದಕ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ. ಇಂತಹ ಸಂದರ್ಭಗಳಲ್ಲಿ ಮುಸ್ಲಿಂ ಯುವಕರೂ ಸಾಕಷ್ಟು ಸಂಖ್ಯೆಯಲ್ಲಿ ಗಾಂಜಾ ವ್ಯಸನಿಗಳಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ತಲೆನೋವಾಗಿದೆ ಎಂದರು.

ಬಹಿಷ್ಕಾರದಂತಹ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು: ‌ಗಾಂಜಾ ಮಾರಾಟ ಪತ್ತೆ ಪ್ರಕರಣದಲ್ಲಿ ಹೆಚ್ಚಾಗಿ ಮುಸ್ಲಿಂ ಯುವಕರೇ ಸಿಗುತ್ತಿರುವುದು, ಸುಲಭವಾಗಿ ಆದಾಯ ಪಡೆಯಲು ಕಳ್ಳ ಹಾದಿ ಹಿಡಿಯುತ್ತಿರುವುದಕ್ಕೆ ಮತ್ತು ಸಮುದಾಯದ ಯುವಕರು ಹಾದಿತಪ್ಪುವುದನ್ನು ತಪ್ಪಿಸಲು ಮಸೀದಿ ಸಮಿತಿ ಬಹಿಷ್ಕಾರದಂತಹ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದಲ್ಲದೆ, ಜಮಾಅತ್‌ನ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಬೇಕು. ಮಾದಕ ವಸ್ತುಗಳ ಸೇವನೆಯಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತವೆ. ಮೊದಲನೆಯದಾಗಿ ಮಾದಕ ವಸ್ತುಗಳನ್ನು ಸೇವಿಸುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಮಾದಕ ವಸ್ತುಗಳನ್ನು ಸೇವಿಸಿದವರು ಸಮಾಜಘಾತುಕ ಕೆಲಸಗಳನ್ನೂ ಮಾಡುತ್ತಾರೆ. ಅಪರಾಧ, ಕೊಲೆ, ಸುಲಿಗೆ, ದರೋಡೆ ಇತ್ಯಾದಿ ಪ್ರಕರಣಗಳನ್ನು ಮಾದಕ ವ್ಯಸನ ಹೊಂದಿರುವವರು ಹೆಚ್ಚಾಗಿ ಮಾರಾಟ ಮಾಡುತ್ತಾರೆ. ಒಮ್ಮೆ ಮಾದಕ ವ್ಯಸನಕ್ಕೆ ತುತ್ತಾದರೆ ಅದರಿಂದ ಸುಲಭವಾಗಿ ಹೊರಕ್ಕೆ ಬರುವುದು ಕಷ್ಟವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಅಪರಿಚಿತರ ನಡೆಗಳ ಬಗ್ಗೆ ನಿಗಾವಹಿಸಿ: ಕಳೆದೆರಡು ದಿನಗಳ ಮುಂಚೆ ಮಾದಕ ದ್ರವ್ಯ ವ್ಯಸನಿಗಳನ್ನು ಯುವಕರು ಸೇರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಮಾಅತಿನ ಯಾರೊಬ್ಬರ ಗಮನಕ್ಕೂ ಬಾರದೆ ಇಷ್ಟು ಸಮಯ ಡ್ರಗ್ಸ್ ಜಾಲದಲ್ಲಿ ತೊಡಗಿರುವುದು ದುರಂತವೇ ಸರಿ. ಡ್ರಗ್ಸ್ ಜಾಲದ ಬಗ್ಗೆ ಕೆಲವು ತಿಂಗಳುಗಳ ಹಿಂದೆಯೇ ಈ ಬಗ್ಗೆ ನಾನು ಜಮಾತ್ ಅನ್ನು ಎಚ್ಚರಿಸಿದ್ದೆ ಎಂದ ಅಝ್ಹರಿ, ಅಪರಿಚಿತರ ನಡೆಗಳ ಬಗ್ಗೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.

ಬಾಡಿಗೆ ಮನೆ ಕೊಡುವಾಗ ಎಚ್ಚರವಿರಲಿ: ತಲಪಾಡಿ ಭಾಗದಲ್ಲಿ ಪ್ರತಿದಿನ ರಾತ್ರಿ ಬೇರೆ ಊರಿನ ಸಣ್ಣ ಪ್ರಾಯದ ಅಪರಿಚಿತ ಯುವಕರು ಒಟ್ಟು ಸೇರುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿ ವಿಚಾರಿಸಬೇಕು. ಇದು ಕೇವಲ ಕಮಿಟಿ, ಪೊಲೀಸರ ಕೆಲಸ ಎಂದು ಭಾವಿಸುವುದು ಬೇಡ. ಜಮಾತ್‌ನ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ಹೊರ ಊರಿನ ಯುವಕರಿಗೆ ಬಾಡಿಗೆ ಮನೆ ಕೊಡುವಾಗ ಅವರ ಇತಿಹಾಸವನ್ನು ಅರಿಯುವುದು ಕಡ್ಡಾಯ ಎಂದು ಅವರು ಎಚ್ಚರಿಸಿದರು.

ಡ್ರಗ್ಸ್ ವ್ಯಸನಿಗಳ ಮನೆಯಿಂದ ಊಟ ಉಸ್ತಾದರಿಗೆ ಅಗತ್ಯವಿಲ್ಲ: ನಮ್ಮ ಮಕ್ಕಳ ಬಗ್ಗೆ ಪ್ರೀತಿ ಇರಲಿ ಜೊತೆಗೆ ಅತಿಯಾದ ನಂಬಿಕೆ ಬೇಡ. ಹೆತ್ತವರು ಕೂಡ ತಮ್ಮ ಮಕ್ಕಳ ಮೇಲೆ ಎರಡೂ ಕಣ್ಣುಗಳನ್ನು ಇಡಬೇಕು. ಡ್ರಗ್ಸ್ ವ್ಯಸನಿಗಳ ಮನೆಯಿಂದ ಊಟ ಅಥವಾ ಸಂಬಳ ಕೂಡ ನಮ್ಮಂತಹ ಉಸ್ತಾದರಿಗೆ ಅಗತ್ಯವಿಲ್ಲ. ಶಾಲೆಗೆ, ಅಥವಾ ಕೆಲಸಕ್ಕೆ ಹೋಗುವ ಯುವಕರು ತಡ ರಾತ್ರಿವರೆಗೆ ಮನೆ ಸೇರದಿದ್ದರೆ ಹೆತ್ತವರು ವಿಚಾರಣೆ ನಡೆಸಬೇಕು ಎಂದು ಅವರು ಪೋಷಕರಿಗೆ ಸಲಹೆ ನೀಡಿದರು.

ಮದುವೆ ಹೆಸರಿನಲ್ಲಿ ಅನಾಚಾರ ಸರಿಯಲ್ಲ: ಮಸೀದಿ ಪರಿಸರದಲ್ಲೇ ಇರುವ ಅದೆಷ್ಟು ಯುವಕರ ಪರಿಚಯವೇ ಇಲ್ಲ. ಕಾರಣ ಅಲ್ಲಾಹನ ಭವನಕ್ಕೂ ಅವರಿಗೂ ಸಂಬಂಧವೆ ಇಲ್ಲದೆ ಇರೋದು ದುರದೃಷ್ಟಕರ. ಯುವಕರು ಹೆಚ್ಚು ಹೆಚ್ಚು ಮಸೀದಿಯೊಂದಿಗೆ, ಆತ್ಮೀಯ ಸಂಬಂಧವಿರಿಸಿಕೊಂಡಾಗ ಇಂತಹ ದುಶ್ಚಟ ಗಳಿಂದ ದೂರವಾಗಬಹುದು ಎಂದು ಅವರು ನುಡಿದರು.
ಅದು ಮಾತ್ರವಲ್ಲದೆ ಜಮಾಅತಿನಲ್ಲಿ ಮದುವೆ ಎಂಬ ಸುಂದರ ಕಾರ್ಯದಲ್ಲಿ ಅನಿಸ್ಲಾಮಿಕವಾದ ಬ್ರೈಡ್, ಹಳದಿ, ಯಂತ ಇಸ್ಲಾಮಿನಲ್ಲಿಲದ, ಅನಾಚಾರವನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ನಾವೆಲ್ಲರೂ ಒಟ್ಟು ಸೇರಿ ಜಮಾತಿನ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!