ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು: ಉಮರ್ ಫಾರೂಕ್ ಫರಂಗಿಪೇಟೆ
ಬಂಟ್ವಾಳ: ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ರೂಪಿಸಿ ಸುಶಿಕ್ಷಿತ ಸಮಾಜವನ್ನು ನಿರ್ಮಿಸುವ ಮೂಲಕ ದೇಶದ ಅಭಿವೃದ್ಧಿಗೆ ಶಿಕ್ಷಕರು ನೀಡುತ್ತಿರುವ ಪಾತ್ರ ಮಹತ್ತರವಾದದ್ದು ಎಂದು ಟುಡೇ ಫೌಂಡೇಶನ್ ಅಧ್ಯಕ್ಷ ಎಫ್.ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪುದು ಮಾಪ್ಲ ಇಲ್ಲಿನ ನಿವೃತ್ತಿ ಹೊಂದುತ್ತಿರುವ ಸಹ ಶಿಕ್ಷಕಿ ಪ್ರಭಾವತಿ ಬಿ. ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದು ದೇಶದ ಸಾಕ್ಷರತೆಯ ಗುಣಮಟ್ಟ ಆ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ. ಸ್ವಾತಂತ್ರ್ಯ ಬಳಿಕ ಭಾರತದ ಸಾಕ್ಷರತೆ ಮಟ್ಟ ಹೆಚ್ಚುತ್ತಾ ಸಾಗಿದ್ದು ಇದರ ಹಿಂದೆ ಶಿಕ್ಷಕರ ಪಾತ್ರ ಮಹತ್ತರದ್ದಾಗಿದೆ. ಶಿಕ್ಷಕರು ನಿವೃತ್ತಿಯ ಬಳಿಕವೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ನಿವೃತ್ತಿ ಎಂದರೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಎಂಬ ಅಭಿಪ್ರಾಯ ಕೆಲವರಲ್ಲಿ ಇದೆ. ನಿವೃತ್ತಿ ಹೊಂದಿದವರು ಆ ಕ್ಷೇತ್ರದಲ್ಲಿ ಅಪಾರ ಜ್ಞಾನ, ಅನುಭವ, ಪ್ರಭುದ್ವತೆ ಹೊಂದಿರುತ್ತಾರೆ. ಅದನ್ನು ಹೊಸ ತಲೆಮಾರಿನ ಶಿಕ್ಷಕರಿಗೆ ಹಂಚಿಕೊಳ್ಳುವ ಮೂಲಕ, ಸಲಹೆ, ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿದಾಗ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಮತ್ತಷ್ಟು ಬದಲಾವಣೆ ಸಾಧ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ಮಗುವಿನ ಶೈಕ್ಷಣಿಕ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಮತ್ತು ಪೋಷಕರು ಕಾರಣ. ಶಿಕ್ಷಕರು ಇಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ ಶಿಕ್ಷಕ ವೃತ್ತಿ ಪಾವಿತ್ರವಾದುದು. ನಿವೃತ್ತಿ ಬಳಿಕವೂ ಶಿಕ್ಷಕರು ತಾವು ಕಾರ್ಯನಿರ್ವಹಿಸಿದ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಬದುಕಿನ ಬಗ್ಗೆ ಸಲಹೆಗಳನ್ನು ನೀಡಬೇಕು ಎಂದರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಪ್ರಭಾವತಿ ಬಿ. ಅವರನ್ನು ಸನ್ಮಾನಿಸಿದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮ್ಲಾನ್ ಕುಂಪನಮಜಲ್, ಸದಸ್ಯರಾದ ಹನೀಫ್ ಅಮೆಮಾರ್, ಇರ್ಫಾನ್ ವಳಚಿಲ್, ಟುಡೆ ಫೌಂಡೇಶನ್ ಸದಸ್ಯರಾದ ಮಜೀದ್ ಫರಂಗಿಪೇಟೆ, ಅಬೂಬಕ್ಕರ್ ಫರಂಗಿಪೇಟೆ, ಪುದು ಗ್ರಾಪಂ ಸದಸ್ಯ ಮುಹಮ್ಮದ್ ಮೋನು ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಉಲ್ಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕಿ ಸುನಿತಾ ಧನ್ಯವಾದಗೈದರು. ಶಿಕ್ಷಕಿ ಶಾಲೆಟ್ ಕಾರ್ಯಕ್ರಮ ನಿರೂಪಿಸಿದರು.




