ತಲಪಾಡಿ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ:
ಆರೋಪಿ ಸಿಸಿಬಿ ಪೊಲೀಸರ ವಶಕ್ಕೆ
ಮಂಗಳೂರು: ಅಲಂಕಾರುಗುಡ್ಡೆ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ವಿದ್ಯಾರ್ಥಿನಿ ಶಾಲೆಗೆ ತೆರಳುವ ಸಂದರ್ಭ ಬಾಲಕಿ ಮೇಲೆ ಕೈ ಹಾಕಿದ ಘಟನೆ ಸಂಬಂಧ ಆರೋಪಿ ಕೆ ಸಿ ರೋಡು ನಿವಾಸಿ ಅಬ್ದುಲ್ ರಾಶಿಕ್ ನನ್ನು ಸಿಸಿಬಿ ಪೊಲೀಸ್ ತಂಡ ವಶಕ್ಕೆ ಪಡೆದಿದ್ದಾರೆ.
ಬುಧವಾರದಂದು ಬೆಳಗ್ಗೆ ತಲಪಾಡಿಯಿಂದ 14 ವರ್ಷದ ಬಾಲಕಿಯೋರ್ವಳು ಒಳರಸ್ತೆಯಾಗಿ ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರಿನಲ್ಲಿ ಬಂದ ಅಪರಿಚಿತನೋರ್ವ ಬಾಲಕಿಯ ಕೈ ಎಳೆದು ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಬಾಲಕಿಯ ಹೆತ್ತವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸ್ಕೂಟರಲ್ಲಿ ಬಂದಿರುವ ಮಾಹಿತಿ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಆಧಾರದ ಮೂಲಕ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.
ಹಿಂದೆಯೂ ಉಚ್ಚಿಲ ಸಮೀಪ ಬಾಲಕಿ ಮೇಲೆ ಕೈ ಹಾಕಿದ್ದ ಭೂಪ, ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ ಒಟ್ಟು ಎರಡು ಪ್ರಕರಣ ದಾಖಲಾಗಿದ್ದು. ಹಲವು ಇಂತಹ ಕೃತ್ಯ ನಡೆಸಿರುವ ಕುರಿತು ಸಿಸಿಬಿಯಿಂದ ವಿಚಾರಣೆ ನಡೆಸುತ್ತಿದ್ದಾರೆ.





