December 16, 2025

ಪೈಪ್ ನಲ್ಲಿ ನೋಟುಗಳ ಕಂತೆ ಪತ್ತೆ ಪ್ರಕರಣ:
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಾಂತಗೌಡ ಬಿರಾದಾರ್ ಜಾಮೀನು ಅರ್ಜಿ ತಿರಸ್ಕಾರ

0
image_editor_output_image-1432498779-1637748598892.jpg

ಕಲಬುರಗಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಯ ವೇಳೆ ಅಪಾರ ಪ್ರಮಾಣದ ನಗದು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿದ್ದ ಲೋಕೋಪಯೋಗಿ ಇಲಾಖೆಯ ಜೇವರ್ಗಿ ಎಂಜಿನಿಯರ್ ಶಾಂತಗೌಡ ಬಿರಾದಾರ್ ಜಾಮೀನು ಅರ್ಜಿಯನ್ನು ಕಲಬುರಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.

ರಾಜ್ಯದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ಪೈಪ್ನಲ್ಲಿ ನೋಟುಗಳ ಪತ್ತೆಯಾಗಿದ್ದು ಸಹ ಇವರ ಮನೆಯಲ್ಲಿಯೇ. ದಾಳಿ ಸಮಯದಲ್ಲಿ ಸಹಕಾರ ನೀಡಲಿಲ್ಲವೆಂಬ ಆರೋಪದ ಮೇಲೆ ಶಾಂತಗೌಡ ಬಿರಾದರ್ ಅವರನ್ನು ಎಸಿಬಿ ಬಂಧಿಸಿತ್ತು. ಜಾಮೀನು ನೀಡುವಂತೆ ಕೋರಿ ಶಾಂತಗೌಡ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ.24ರಂದು ಶಾಂತಗೌಡ ಅವರ ಮನೆ ಮತ್ತು ಕಚೇರಿ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ₹55 ಲಕ್ಷ ನಗದು ಸೇರಿ ₹4.5 ಕೋಟಿ ಮೌಲ್ಯದ ಆಸ್ತಿಯ ವಿವರಗಳು ಸಿಕ್ಕಿದ್ದವು.

ಕಲಬುರಗಿ ನಗರದ ಗುಬ್ಬಿ ಕಾಲೊನಿಯಲ್ಲಿದ್ದ ಪಿಡಬ್ಲೂಡಿ ಎಂಜಿನಿಯರ್ ಶಾಂತಗೌಡ ಬಿರಾದಾರ್ ಅವರ ಮನೆಯ ಬಚ್ಚಲುಮನೆ ಮತ್ತು ವಾಶ್ ಬೇಶನ್ ಪೈಪ್ನಲ್ಲಿ ದುಡ್ಡಿನ ಕಂತೆ ಅಡಗಿಸಿಟ್ಟಿರುವುದು ಎಸಿಬಿ ಅಧಿಕಾರಿಗಳ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಮನೆಯ ಎರಡನೇ ಫ್ಲೋರ್ ನಲ್ಲಿ ವಾಸವಾಗಿರುವ ಶಾಂತಗೌಡ ಮತ್ತು ಪುತ್ರ, ಎಸಿಬಿ ಅಧಿಕಾರಿಗಳು ಬರುತ್ತಿದ್ದಂತೆ ಹಣದ ಕಂತೆಯನ್ನು ಪೈಪ್ಗೆ ಹಾಕಿದ್ದರು. ಪೈಪ್ ನಲ್ಲಿಯೇ ಐದು ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿತ್ತು. ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಕಲಬುರಗಿ ಗುಬ್ಬಿ ಕಾಲೋನಿಯಲ್ಲಿ ಮೂರಂತಸ್ತಿನ ಭವ್ಯ ಬಂಗಲೆ, ವಿವಿ ರಸ್ತೆಯಲ್ಲಿ ಎರಡು ನಿವೇಶನ, ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ 40 ಎಕರೆ ಜಮೀನು, ಹಂಗರಗಾ ಗ್ರಾಮದಲ್ಲಿ ಮೂರು ಮನೆಗಳು ಸೇರಿ ಕೋಟಿಕೋಟಿ ರೂಪಾಯಿ ಮೊತ್ತದ ಆಸ್ತಿ ಪತ್ತೆಯಾಗಿತ್ತು. ಬೆಂಗಳೂರಿನಲ್ಲೂ ಆಸ್ತಿ ಇರುವ ಮಾಹಿತಿ ಸಿಕ್ಕಿದ್ದು, ಎರಡು ಕಾರ್, ಎರಡು ಬೈಕ್ ಸೇರಿ ವಾಹನಗಳು ಪತ್ತೆಯಾಗಿದ್ದವು.

Leave a Reply

Your email address will not be published. Required fields are marked *

error: Content is protected !!