ಸೇಲಂ: ಗ್ಯಾಸ್ ಸಿಲಿಂಡರ್ ಸ್ಫೋಟ:
ಒಬ್ಬರು ಮೃತ್ಯು, 10 ಮಂದಿಗೆ ಗಾಯ
ಸೇಲಂ: ಅಡುಗೆ ಅನಿಲದ ಸಿಲಿಂಡರ್ ಸ್ಫೋಟವಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇನ್ನು 10 ಮಂದಿ ಗಾಯಗೊಂಡ ಘಟನೆ ಸೇಲಂನ ಕಳಿಂಗಪಟ್ಟಿ ಎಂಬಲ್ಲಿ ನಡೆದಿದೆ.
ಪಾಂಡುರಂಗನ್ ರಸ್ತೆಯಲ್ಲಿರುವ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿದ್ದು, ರಾಜಲಕ್ಷ್ಮೀ (80) ಎಂಬುವರು ಮೃತ ಮಹಿಳೆ. ಇವರು ಚಹಾ ಮಾಡಲೆಂದು ಗ್ಯಾಸ್ ಆನ್ ಮಾಡುತ್ತಿದ್ದಂತೆ ಭಾರಿ ಪ್ರಮಾಣದಲ್ಲಿ ಸ್ಫೋಟವುಂಟಾಗಿದೆ. ಸ್ಥಳಕ್ಕೆ ಶೇವಾಪೇಟ್ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಅಗ್ನಿಶಾಮಕದಳದ ಸಿಬ್ಬಂದಿಯೂ ಧಾವಿಸಿದ್ದರು.
ಸಿಲಿಂಡರ್ ಸ್ಫೋಟಗೊಂದ ಮನೆಯಲ್ಲಿದ್ದ ಗೋಪಿ (52) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುತ್ತಲಿದ್ದ ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದ್ದು, ವೆಂಕಟರಾಜನ್, ಇಂದಿರಾಣಿ, ಮೋಹನ್ ರಾಜ್, ನಾಗಸುತ, ಗೋಪಾಲ್, ಧನಲಕ್ಷ್ಮೀ, ಸುದರ್ಶನ್, ಗಣೇಶನ್, ಉಷಾರಾಣಿ, ಲೋಕೇಶ್ ಗಾಯಗೊಂಡವರು.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿಯಿಂದ ಸಂತ್ರಸ್ತರನ್ನು ರಕ್ಷಿಸಿದರು. ರಕ್ಷಿಸಲ್ಪಟ್ಟ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಮೋಹನ್ ಕುಮಾರಮಂಗಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಜಿಲ್ಲಾಧಿಕಾರಿ ಎಸ್.ಕಾರ್ಮೇಘಂ, ಸೇಲಂ ಕಾರ್ಪೊರೇಷನ್ ಆಯುಕ್ತ ಟಿ.ಕ್ರಿಸ್ತರಾಜ್ ಮತ್ತು ಡಿಎಂಕೆ ಶಾಸಕ ಆರ್.ರಾಜೇಂದ್ರನ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
ಅವಶೇಷಗಳಡಿ ಸಿಲುಕಿರುವ ಅಗ್ನಿಶಾಮಕ ಅಧಿಕಾರಿ ಪದ್ಮನಾಭನ್ ಸೇರಿದಂತೆ ಇನ್ನೂ ಮೂವರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.





