ಆ್ಯಪಲ್ ಕಂಪೆನಿಗೆ ವಂಚನೆ: ಭಾರತೀಯ ಮೂಲದ ಮಾಜಿ ಆ್ಯಪಲ್ ಉದ್ಯೋಗಿಗೆ ಜೈಲು ಶಿಕ್ಷೆ ಮತ್ತು ಬಾರೀ ಮೊತ್ತದ ದಂಡ
ಕ್ಯಾಲಿಫೋರ್ನಿಯಾ: ಭಾರತೀಯ ಮೂಲದ ಮಾಜಿ ಆ್ಯಪಲ್ ಉದ್ಯೋಗಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಂಪನಿಯಿಂದ 17 ಮಿಲಿಯನ್ ಡಾಲರ್‌ಗಳನ್ನು ವಂಚಿಸಿದ್ದಕ್ಕಾಗಿ ಕಂಪನಿಗೆ 19 ಮಿಲಿಯನ್ ಡಾಲರ್‌ಗಳನ್ನು ಪಾವತಿಸಲು ಆದೇಶಿಸಲಾಗಿದೆ.
ಭಾರತೀಯ ಮೂಲದ ಮಾಜಿ ಆ್ಯಪಲ್ ಉದ್ಯೋಗಿ ಧೀರೇಂದ್ರ ಪ್ರಸಾದ್‌ಗೆ ಅಮೆರಿಕದ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ನೀಡಿದೆ. ಜತೆಗೆ, ಕಂಪನಿಗೆ ಸುಮಾರು 157 ಕೋಟಿ ರೂಪಾಯಿಯಷ್ಟು ಹಣ ಮರುಪಾವತಿ ಮಾಡುವಂತೆ ಆದೇಶಿಸಿದೆ.
ಆ್ಯಪಲ್ ಐಎನ್‌ಸಿಗೆ ಹಲವು ದಶಲಕ್ಷ ಡಾಲರ್ ವಂಚಿಸಿದ ಮತ್ತು ಸಂಬಂಧಪಟ್ಟ ತೆರಿಗೆ ವಂಚನೆ ಅಪರಾಧಗಳಿಗೆ ಸಂಚು ರೂಪಿಸಿರುವ ಆರೋಪದಡಿ ಆ್ಯಪಲ್ ಕಂಪನಿಯ ಮಾಜಿ ಉದ್ಯೋಗಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ಅಮೆರಿಕ ಅಟಾರ್ನಿ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಿಕ್‌ಬ್ಯಾಕ್‌ಗಳನ್ನು ಸ್ವೀಕರಿಸಿ, ಬಿಡಿಭಾಗಗಳನ್ನು ಕದಿಯುವ ಮೂಲಕ, ಇನ್‌ವಾಯ್ಸ್‌ಗಳನ್ನು ಹೆಚ್ಚಿಸುವ ಮೂಲಕ ಮತ್ತು ಎಂದಿಗೂ ವಿತರಿಸದ ಸರಕುಗಳಿಗೆ ಕಂಪನಿಗೆ ಶುಲ್ಕ ವಿಧಿಸುವ ಮೂಲಕ ಆ್ಯಪಲ್‌ನಿಂದ ಹಣವನ್ನು ಕಸಿದುಕೊಂಡಿರುವುದನ್ನು ಪ್ರಸಾದ್ ಒಪ್ಪಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸಾದ್ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದು, ಆ್ಯಪಲ್ ಕಂಪನಿಗೆ ವಂಚನೆ ಮಾಡಿ ಗಳಿಸಿದ ಆಸ್ತಿ ಮತ್ತು ಹಣವನ್ನು ಹಿಂದಿರುಗಿಸಬೇಕು. ಹೆಚ್ಚುವರಿಯಾಗಿ, ಅವರು ಪಾವತಿಸಲು ವಿಫಲವಾದ ತೆರಿಗೆ ಹಣವನ್ನು ಮರುಪಾವತಿ ಮಾಡಬೇಕು. ಜೈಲಿನಿಂದ ಬಿಡುಗಡೆಯಾದ ನಂತರ ಮೂರು ವರ್ಷಗಳ ಕಾಲ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.




