ಜಿಂಕೆ ಕೊಂಬುಗಳ ಸಾಗಾಟ:
18 ಜಿಂಕೆ ಕೊಂಬು ಮತ್ತು ಇಬ್ಬರು ವಶಕ್ಕೆ
ಬೆಂಗಳೂರು: ವನ್ಯಪ್ರಾಣಿ ಜಿಂಕೆ ಕೊಂಬುಗಳನ್ನು ಚೀಲಗಳಲ್ಲಿ ತುಂಬಿಕೊಂಡು ನಗರಕ್ಕೆ ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ದಕ್ಷಿಣ ವಿಭಾಗದ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿ 18 ಜಿಂಕೆ ಕೊಂಬು ವಶಪಡಿಸಿಕೊಂಡಿದ್ದಾರೆ.
ಮೂಲತಃ ಚಾಮರಾಜನಗರದ ಕೊಳ್ಳೇಗಾಲ ನಿವಾಸಿ ಮಾದಯ್ಯ (35) ಮತ್ತು ರಾಮನಗರ ನಿವಾಸಿ, ಹನೂರು ತಾಲ್ಲೂಕಿನ ರಮೇಶ್ (38) ಬಂಧಿತ ಆರೋಪಿಗಳು.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಬನಶಂಕರಿ 3ನೆ ಹಂತ, ಶ್ರೀಕಂಠೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆಯ ಸಿಕೆ ಅಚ್ಚುಕಟ್ಟು ಬಸ್ ನಿಲ್ದಾಣದ ಹಿಂದಿನ ಕಾಂಪೌಂಡ್ ಪಕ್ಕದಲ್ಲಿ ಇಬ್ಬರು ಎರಡು ಚೀಲಗಳಲ್ಲಿ ಜಿಂಕೆ ಕೊಂಬುಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡಲು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾವಿಸಿ ಇಬ್ಬರನ್ನು ಬಂಧಿಸಿ ಹೆಸರು, ವಿಳಾಸ ಕೇಳಿ ನಂತರ ಚೀಲಗಳನ್ನು ನೋಡಿದಾಗ ಜಿಂಕೆ ಕೊಂಬುಗಳು ಇರುವುದು ಪತ್ತೆಯಾಗಿದೆ.
ಆರೋಪಿಗಳಿಂದ 18 (9 ಜತೆ) ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿರುವ ಸಿಕೆ ಅಚ್ಚುಕಟ್ಟು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಜಿಂಕೆ ಕೊಂಬುಗಳನ್ನು ಎಲ್ಲಿಂದ ಆರೋಪಿಗಳು ತಂದರು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.





