ಬೆಳ್ತಂಗಡಿ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ
ಬೆಳ್ತಂಗಡಿ: ಪಿಲತ್ತಡ್ಕದಲ್ಲಿ ಅ. 2ರಂದು ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸಾವಿರಾರು ರೂ. ನಷ್ಟವಾಗಿದ್ದು, ದನ-ಕರುಗಳು ಗಾಯಗೊಂಡಿವೆ.
ಪೂವಪ್ಪ ಪೂಜಾರಿ ಅವರ ಪುತ್ರ ಸುರೇಶ ಹೈನುಗಾರರಾಗಿದ್ದು, ದನಗಳನ್ನು ಹಟ್ಟಿಯಲ್ಲಿ ಸಾಕುತ್ತಿದ್ದರು. ಒಟ್ಟು ಹಾಲು ಕರೆಯುವ ಐದು ದನ ಹಾಗೂ ಇವುಗಳ ಐದು ಕರುಗಳಿರುವ ಹಟ್ಟಿಗೆ ಬೆಂಕಿ ತಗಲಿದ್ದು, ಬೈ ಹುಲ್ಲು, ಹಿಂಡಿ ಇನ್ನಿತರ ಸಾಮಗ್ರಿಗಳು ಸುಟ್ಟು ಹೋಗಿವೆ.
ಮನೆಮಂದಿ ಹಟ್ಟಿಗೆ ಸೊಪ್ಪು, ಹುಲ್ಲು ಇತ್ಯಾದಿಗಳನ್ನು ತರಲು ಹೊರಗಡೆ ಹೋಗಿದ್ದರು. ಈ ವೇಳೆ ದನದ ಕೊಟ್ಟಿಗೆಗೆ ಬೆಂಕಿ ತಗಲಿತ್ತು. ಈ ಸಮಯ ಪಕ್ಕದ ಮನೆಯ ಶ್ರೀಧರ ಪೂಜಾರಿ ಅವರಿಗೆ ಹಟ್ಟಿಯ ಭಾಗದಿಂದ ಹೊಗೆ ಕಂಡುಬಂದಿದ್ದು ಅಷ್ಟರದ್ದಾಗಲೇ ಬೆಂಕಿ ಹಟ್ಟಿಯನ್ನು ವ್ಯಾಪಿಸತೊಡಗಿತ್ತು. ಈ ಸಮಯ ದನಕರುಗಳನ್ನು ಕಟ್ಟಿ ಹಾಕಿದ್ದ ಹಗ್ಗಗಳನ್ನು ತುಂಡರಿಸಿ ಹೊರಗೆ ಬಿಡಲಾಯಿತು.
ಆದರೂ, ಬೆಂಕಿಯು ವ್ಯಾಪಿಸಿ ದನ ಕರುಗಳಿಗೆ ಗಾಯಗಳಾಗಿವೆ. ಹಟ್ಟಿಯ ಸಮೀಪವೇ ಇರುವ ಮನೆಗೆ ಬೆಂಕಿಯಿಂದ ಅನಾಹುತ ಉಂಟಾಗದಂತೆ ಸ್ಥಳೀಯರು ಮುನ್ನೆಚ್ಚರಿಕೆ ಕೈಗೊಂಡಿದ್ದರು.