11 ಲಕ್ಷ ರೂ. ಮೌಲ್ಯದ ಕಾರಿನ ದುರಸ್ತಿಯ ಬೆಲೆ 22 ಲಕ್ಷ ರೂ.: ಕಾರು ಮಾಲಕನಿಗೆ ಶಾಕ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ತಿಂಗಳು ವರುಣ ಸೃಷ್ಟಿಸಿದ ಅವಾಂತರಕ್ಕೆ ಹಾಳಾಗಿದ್ದ ಕಾರೊಂದನ್ನು ದುರಸ್ತಿಗೆ ನೀಡಲಾಗಿದ್ದ ಮಾಲಕನಿಗೆ ಕಾರಿನ ದುರಸ್ತಿ ಬೆಲೆ ನೋಡಿ ಶಾಕ್ ಆಗಿದೆ. ಏಕೆಂದರೆ 11 ಲಕ್ಷ ರೂ. ಮೌಲ್ಯದ ಕಾರಿನ ದುರಸ್ತಿಯ ಅಂದಾಜು ಬೆಲೆ 22 ಲಕ್ಷ ರೂ.!
ಮಳೆಯಿಂದ ಹಾನಿಗೊಳಗಾದ ವೋಲ್ಸ್ವ್ಯಾಗನ್ ಕಾರನ್ನು ಮಾಲಕ ಅನಿರುದ್ಧ್ ಗಣೇಶ್ ಎಂಬುವವರು ರಿಪೇರಿಗೆಂದು ವೈಟ್ಫೀಲ್ಡ್ನಲ್ಲಿರುವ ವೋಕ್ಸ್‌ವ್ಯಾಗನ್ ಆಪಲ್ ಆಟೋ ಸರ್ವೀಸ್ ಕೇಂದ್ರಕ್ಕೆ ನೀಡಿದ್ದರು. ರಿಪೇರಿಗೂ ಮುನ್ನ ಅಂದಾಜು ಮೊತ್ತದ ಬಿಲ್ ನೋಡಿ ಅನಿರುದ್ ಆಘಾತಕ್ಕೊಳಗಾದರು. ಸದ್ಯ ಅವರು ಬಿಲ್ನ ಇನ್ವಾಯ್ಸ್ ಅನ್ನು ತಮ್ಮ ಲಿಂಕ್ಡಿನ್ ಪ್ರೊಫೈಲ್ನಲ್ಲಿ ಶೇರ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದೆ.
ಕಾರಿನ ವಿಮಾ ಕಂಪೆನಿಯು ಒಟ್ಟು ನಷ್ಟವೆಂದು ಬರೆದು ಹಣವನ್ನು ಸಂಗ್ರಹಿಸುವುದಾಗಿ ಭರವಸೆ ನೀಡಿದ್ದರೂ, ಸರ್ವೀಸ್ ಕೇಂದ್ರದಿಂದ ಕಾರು ಪಡೆದುಕೊಳ್ಳಲು 44,840 ರೂ. ಪಾವತಿಸುವಮತೆ ಸೂಚಿಸಿದೆ. ಅಲ್ಲದೆ ಹಾನಿಯ ದಾಖಲೆಗಳನ್ನು ಸಲ್ಲಿಸಲು ಇದು ಕಡ್ಡಾಯ ಎಂದೂ ಸೂಚಿಸಿತ್ತು. ಈ ಬಗ್ಗೆ ವೋಕ್ಸ್‌ವ್ಯಾಗನ್ ಇಂಡಿಯಾಗೆ ಮೇಲ್ ಮುಖಾಂತರ ಅನಿರುದ್ ದೂರು ಸಲ್ಲಿಸಿದ್ದಾರೆ. ಆದರೆ 48 ಗಂಟೆಗಳಲ್ಲಿ ಉತ್ತರದ ಭರವಸೆ ಕಂಪೆನಿಯಿಂದ ಬಂದಿದ್ದರೂ, ಈವರೆಗೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.